ಬಕ್ರೀದ್ ಹಬ್ಬದ ಸಂದರ್ಭ ಸೂಕ್ತ ರಕ್ಷಣೆ ಒದಗಿಸಲು ಮುಖ್ಯಮಂತ್ರಿಗೆ ಮನವಿ 


ಬೆಂಗಳೂರು,: ರಾಜ್ಯಾದ್ಯಂತ ಈದುಲ್ ಅಝ್‍ಹಾ ಆಚರಣೆ ಮಾಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಗಳಿಂದ ಸೂಕ್ತ ರಕ್ಷಣೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕರ ನಿಯೋಗ ಮನವಿ ಮಾಡಿದೆ. ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಶಾಸಕರ ನಿಯೋಗವು, ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದವರು ಸಾವಿರಾರು ವರ್ಷಗಳಿಂದ ಈದುಲ್ ಅಝ್‍ಹಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಹಬ್ಬವು ಮುಸ್ಲಿಮ್ ಸಮುದಾಯದ ಪವಿತ್ರ ಹಬ್ಬವಾಗಿರುತ್ತದೆ ಎಂದು ತಿಳಿಸಿತು. ಈ ಹಬ್ಬದ ದಿನದಂದು ಎಲ್ಲ ಮುಸ್ಲಿಮ್ ಸಮುದಾಯದವರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ದೇವರ ಹೆಸರಿನಲ್ಲಿ ಬಲಿಯನ್ನು ನೀಡಿ, ಅದನ್ನು ಬಡ ವರ್ಗದವರಿಗೆ ದಾನವಾಗಿ ನೀಡುತ್ತಾ ಬರುತ್ತಿದ್ದಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆ ಎಂದು ಶಾಸಕರು, ಮುಖ್ಯಮಂತ್ರಿಗೆ ಮನದಷ್ಟು ಮಾಡಿಕೊಟ್ಟರು. ಆದುದರಿಂದ, ಆ.12ರಂದು ರಾಜ್ಯಾದ್ಯಂತ ನಡೆಯುತ್ತಿರುವ ಈದುಲ್ ಅಝ್‍ಹಾ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ವಾಹನಗಳಲ್ಲಿ ಸಾಗಿಸಲು ಅಡಚಣೆ ಮಾಡದಂತೆ ಹಾಗೂ ಈ ಹಬ್ಬವನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆಗೆ ಮತ್ತು ಜಿಲ್ಲಾಡಳಿತದಿಂದ ಸೂಕ್ತ ರಕ್ಷಣೆ ನೀಡುವಂತೆ ಆದೇಶಿಸಲು ಶಾಸಕರು ಮನವಿ ಮಾಡಿದರು. ಶಾಸಕರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈದುಲ್ ಅಝ್‍ಹಾ ಹಬ್ಬದ ಬಳಿಕ ನೀವು ಮತ್ತೊಮ್ಮೆ ನನ್ನನ್ನು ಭೇಟಿ ಮಾಡಿ, ಎಲ್ಲಿಯಾದರೂ ಇಂತಹ ಒಂದೇ ಒಂದು ಘಟನೆ ಜರುಗಿರುವ ಬಗ್ಗೆ ತಿಳಿಸಿ. ಆ ರೀತಿಯಲ್ಲಿ ಯಾರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಈಗಲೇ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು, ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸೂಕ್ತವಾದ ನಿರ್ದೇಶನ ನೀಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.
Previous Post
Next Post

0 Post a Comment: