ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ: ಡಾ.ಕೃಷ್ಣಾನಂದ

TOC ಮಡಿಕೇರಿ:-ಗರ್ಭಿಣಿಯ ಆರೋಗ್ಯ ಚೆನ್ನಾಗಿದ್ದಲ್ಲಿ ಹುಟ್ಟುವ ಮಗುವೂ ಸಹ ಆರೋಗ್ಯಯುತವಾಗಿರುತ್ತದೆ. ಆದ್ದರಿಂದ ಮಗು ಹುಟ್ಟುವ ಮೊದಲು ತಾಯಿಯನ್ನು ಆರೋಗ್ಯಯುತವಾಗಿ ನೋಡಿಕೊಳ್ಳಬೇಕು ಎಂದು ಮಕ್ಕಳ ತಜ್ಞರಾದ ಡಾ.ಕೃಷ್ಣಾನಂದ ಅವರು ತಿಳಿಸಿದ್ದಾರೆ. 
ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ನವಜಾತ ಶಿಶು-ವಾರ ಆಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗರ್ಭಾವಸ್ಥೆಯಲ್ಲಿಯೇ ತಾಯಿಯನ್ನು ಆರೋಗ್ಯಯುತವಾಗಿ ನೋಡಿಕೊಳ್ಳಬೇಕು. ಇದರಿಂದ ಹುಟ್ಟುವ ಮಗು ಆರೋಗ್ಯಯುತವಾಗಿರುತ್ತದೆ. ಇದರಿಂದ ಮಗುವಿನ ಭೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ತಾಯಿಯ ಹೊಟ್ಟೆಯಲ್ಲಿ ಮಗು ಒಂಭತ್ತು ತಿಂಗಳು ಬೆಳೆಯಬೇಕು. ಜನನ ಸಂದರ್ಭದಲ್ಲಿ ಕನಿಷ್ಠ ಎರಡೂವರೆ ಕೆ.ಜಿ. ತೂಕವಿರಬೇಕು. ಹೆರಿಗೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲೇ ಮಾಡಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಮರಣ ತಡೆಯಬಹುದು ಎಂದು ಕೃಷ್ಣಾನಂದ ಅವರು ತಿಳಿಸಿದರು.
‘ದೇಶದಲ್ಲಿ ಜನಿಸುವ ಒಂದು ಸಾವಿರ ಮಕ್ಕಳಲ್ಲಿ 30 ರಿಂದ 40 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ 28 ಮಕ್ಕಳು ಹಾಗೆಯೇ ಜಿಲ್ಲೆಯಲ್ಲಿ 10 ಮಕ್ಕಳು ಮೃತಪಡುತ್ತಿದ್ದಾರೆ. ಮಕ್ಕಳ ಮರಣ ತಡೆಯಲು ತಾಯಿ ಮತ್ತು ಮಗುವಿನ ಆರೋಗ್ಯ ಕಡೆ ಹೆಚ್ಚಿನ ನಿಗಾವಹಿಸಬೇಕು ಎಂದು ಅವರು ಸಲಹೆ ಮಾಡಿದರು. 
ತಾಯಿಯ ಎದೆ ಹಾಲು ಅಮೃತವಾಗಿದ್ದು, ಮಕ್ಕಳಿಗೆ ತಾಯಿ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಬೇಕು. ಹುಟ್ಟಿದ ಮಗು ದೇವರು ಕೊಟ್ಟ ವರ ಎಂಬುದನ್ನು ತಿಳಿಯಬೇಕು ಎಂದರು.
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಹರ್ಷ ಅವರು ಮಾತನಾಡಿ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಗೆ ಕಾಲ ಕಾಲಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಏಳು ತಿಂಗಳ ನಂತರ 15 ದಿನಗಳಿಗೊಮ್ಮೆ ಹಾಗೂ ಒಂಭತ್ತನ್ನೇ ತಿಂಗಳಲ್ಲಿ ವಾರಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಔಷಧೋಪಚಾರ ಪಡೆಯಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ ಗರ್ಭಿಣಿಯರು ಆರೋಗ್ಯಯುತವಾಗಿರಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿರಬೇಕು. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ರಕ್ತ ಹೀನತೆ ತಡೆಗಟ್ಟಬೇಕು. ಆ ನಿಟ್ಟಿನಲ್ಲಿ ಇಂದ್ರಧನುಷ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಗರ್ಭೀಣಿಯರು ಮತ್ತು ಮಕ್ಕಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಸ್ವಚ್ಛತೆ ಕಡೆ ವಿಶೇಷ ಗಮನ ಹರಿಸಬೇಕು. ಇದರಿಂದ ಸೋಂಕನ್ನು ತಡೆಯಬಹುದು. ಸರ್ಕಾರ ಗರ್ಭೀಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದರು.
ಡಾ.ವೀರೇಂದ್ರ ಕುಮಾರ್ ಅವರು ‘ಕಾಂಗಾರೂ ಮದರ್ ಕೇರ್’ ಬಗ್ಗೆ ಮಾಹಿತಿ ನೀಡಿದರು. ಮಗುವನ್ನು ಶುಭ್ರವಾದ ಬಟ್ಟೆಯಲ್ಲಿ ಬೆಚ್ಚಗೆ ಇಟ್ಟುಕೊಳ್ಳಬೇಕು. ತಾಯಿ ಮತ್ತು ಮಗುವಿನ ಬಾಂಧವ್ಯ ಇದರಿಂದ ಹೆಚ್ಚಾಗುತ್ತದೆ. ಹಾಗೆಯೇ ಮಗುವಿನ ಆರೋಗ್ಯ ಬೆಚ್ಚಗಿನ ವಾತಾವರಣಕ್ಕೆ ಅನುಕೂಲವಾಗಲಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಮಕ್ಕಳ ವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ ಅವರು ಮಾತನಾಡಿ ಕಾಂಗಾರೂ ಮದರ್ ಕೇರ್ ಸೌಲಭ್ಯ ಪಡೆಯಲು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಪ್ರತ್ಯೇಕ ಕೊಠಡಿ ತೆರೆಯಲಾಗಿದ್ದು, ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು. ಮಗುವಿಗೆ ಬೆಚ್ಚಗಿನ ವಾತಾವರಣ ನಿರ್ಮಾಣ ಮಾಡುವುದರಿಂದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಡಾ.ಶ್ರೀನಿವಾಸ ಗೌಡ ಅವರು ತಾಯಿ ಮತ್ತು ಮಗುವಿನ ಆರೋಗ್ಯ ಸಂಬಂಧ ಹಲವು ಮಾಹಿತಿ ನೀಡಿದರು. ನವಜಾತ ಶಿಶು ವಾರ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುಟ್ಟಮ್ಮ ಮತ್ತು ಇತರರು ಹಿಂದೆ ನಮ್ಮ ಕಾಲದಲ್ಲಿ ಮಕ್ಕಳಿಗೆ ಹರಳೆಣ್ಣೆ ಹಚ್ಚುವುದು, ಬಳೆ ಕಾಯಿಸಿ ಸುಡುವುದು, ಗಣಕ್ಕೆ ಸೊಪ್ಪು ಅರೆದು ಕುಡಿಸುತಿದ್ದೇವು. ಈಗ ವೈದ್ಯರು ಹೇಳಿದಂತೆ ಕೇಳುತ್ತೇವೆ ಎಂದು ಅವರು ಹೇಳಿದರು. ಡಾ.ಸಲ್ಮಾ, ಡಾ.ದಿವ್ಯ, ಡಾ.ಅಕ್ಷತಾ, ಡಾ.ಮಾಲತೇಶ್ ಹಾವನೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಇತರರು ಇದ್ದರು.
Previous Post
Next Post

0 Post a Comment: