ಮೈಸೂರು (TOC ನ್ಯೂಸ್) : ದಸರಾ ಉತ್ಸವದ ಕೇಂದ್ರ ಬಿಂದು, ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಜಂಬೂಸವಾರಿ ಹಿನ್ನೆಲೆ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಸಜ್ಜಾಗಿದ್ದು ಅರ್ಜುನನಿಗೆ ಬೆಳ್ಳಂಬೆಳಿಗ್ಗೆ ಮಹಾಮಜ್ಜನ ಮಾಡಲಾಗಿದೆ. ತಣ್ಣೀರಿನ ಸ್ನಾದ ಬಳಿಕ ಕ್ಯಾಪ್ಟನ್ ಅರ್ಜುನನಿಗೆ ಬಿಸಿ ನೀರಿನ ಸ್ನಾನ ಮಾಡಿಸಲಾಗಿದೆ.
ಅರಮನೆ ಪ್ರವೇಶಿಸಿದ 42 ದಿನಗಳಿಂದ ಕ್ಯಾಪ್ಟನ್ ಅರ್ಜುನ ತಾಲೀಮು ನಡೆಸುತ್ತಿದ್ದ. ನಾಡಿಗೆ ಬಂದಾಗ ಅರ್ಜುನ 5,800 ಕೆಜಿ ತೂಕವಿದ್ದ. ನಾಡಿಗೆ ಬಂದು ಅರ್ಜುನ 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಸದ್ಯ ಅರ್ಜುನ ಆನೆಯ ತೂಕ 6,040ಕೆ.ಜಿಯಷ್ಟಿದೆ.
ಸತತವಾಗಿ 8ನೇ ಬಾರಿ ಕ್ಯಾಪ್ಟನ್ ಅರ್ಜುನ ಚಿನ್ನದ ಅಂಬಾರಿ ಹೊರಲಿದ್ದು, ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ಉತ್ಸವ ಮೂರ್ತಿ ಹೊತ್ತು ಅರ್ಜುನ ರಾಜಬೀದಿಗಳಲ್ಲಿ ಸಂಚರಿಸಲಿದ್ದಾನೆ.
ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಲೋ ಮೀಟರ್ವರೆಗೆ ಗಜಪಡೆ ಸಾಗಲಿದೆ. ಅರಮನೆ ಆವರಣದಿಂದ ಸಾಗಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ದ್ವಾರ, ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಮಾರ್ಗ, ಆರ್ಯುವೇದಿಕ್ ವೃತ್ತ ಮಾರ್ಗವಾಗಿ, ಬೆಂಗಳೂರು ಮೈಸೂರು ರಸ್ತೆ ಮುಖಾಂತರ ಬನ್ನಿಮಂಟಪಕ್ಕೆ ಗಜಪಡೆ ಸೇರಲಿದೆ. ಮಾವುತ ವಿನೂ ಸೂಚನೆ ಮೇರೆಗೆ ಕ್ಯಾಪ್ಟನ್ ಅರ್ಜುನ ರಾಜಬೀದಿಗಳಲ್ಲಿ ಸಾಗಲಿದ್ದಾನೆ.

0 Post a Comment: