ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರ : 50ರಷ್ಟು ಶಾಸಕರ ಬೆಂಬಲ


ಬೆಂಗಳೂರು : "ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ನೇಮಿಸುವಂತೆ ಕಾಂಗ್ರೆಸ್‌ನ 50-60 ಶಾಸಕರು ಒಗ್ಗೂಡಿ ಪಕ್ಷದ ವರಿಷ್ಠರಿಗೆ ಒತ್ತಾಯಿಸುತ್ತೇವೆ," ಎಂಬುದಾಗಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್‌ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. "ಬೆಂಗಳೂರಿಗೆ ಶೀಘ್ರವೇ ಭೇಟಿ ನೀಡಲಿರುವ ಪಕ್ಷದ ವರಿಷ್ಠ ಮಧುಸೂಧನ್‌ ಮಿಸ್ತ್ರಿ ಅವರನ್ನು 50-60 ಶಾಸಕರು ಭೇಟಿಯಾಗಿ, ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷ ನಾಯಕರಾಗಿ ನೇಮಿಸುವಂತೆ ನಮ್ಮ ಬೇಡಿಕೆ ಮಂಡಿಸುತ್ತೇವೆ'' ಎಂದರು. ಅಕ್ಟೋಬರ್‌ 10 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಇದಕ್ಕೂ ಮೊದಲು ಪ್ರತಿಪಕ್ಷ ನಾಯಕನನ್ನು ಕಾಂಗ್ರೆಸ್‌ ಹೈಕಮಾಂಡ್‌ ಆಯ್ಕೆ ಮಾಡುವ ಸಾಧ್ಯತೆ ಇದೆ. ಆದರೆ ಪಕ್ಷದಲ್ಲಿ ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು, ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ತಾವೂ ಆಕಾಂಕ್ಷಿ ಎಂದಿರುವುದರಿಂದ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಮೂಲ ಕಾಂಗ್ರೆಸಿಗರು ಪಾಟೀಲ್‌ ಬೆನ್ನಿಗೆ ನಿಂತಿರುವುದರಿಂದ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನ ಹುದ್ದೆ ಕೈ ತಪ್ಪಲಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದರ ನಡುವೆ ಭೀಮಾ ನಾಯ್ಕ್‌ ಈ ಹೇಳಿಕೆ ನೀಡಿದ್ದಾರೆ.
Previous Post
Next Post

0 Post a Comment: