ಸಿದ್ದಾಪುರ: ಪ್ರವಾಹ ಸಂತ್ರಸ್ತರಿಗೆ ನಿವೇಶನ ಕಲ್ಪಿಸಲು ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ

ಸಿದ್ದಾಪುರ (TOC ನ್ಯೂಸ್ @ ಮುಸ್ತಫ ಸಿದ್ಧಾಪುರ), ಫೆ.10: ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಐದು ತಿಂಗಳು ಕಳೆದರೂ ಸಂತ್ರಸ್ತರಿಗೆ ಶಾಶ್ವತ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದ್ದು, ಶಾಶ್ವತ ನಿವೇಶನ ಒದಗಿಸಲು ಒತ್ತಾಯಿಸಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು ಫಲಕಾರಿಯಾಗದೆ ಆಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ.

ಸಂತ್ರಸ್ತರಾದ ಬೆಳ್ಯಮ್ಮ ಹಾಗೂ ಸುಶೀಲ ಪ್ರತಿಭಟನೆಯನ್ನು ಉದ್ಘಾಟಿಸಿದರು.
ಸಂತ್ರಸ್ತರ ನಿವೇಶನ ಹೋರಾಟ ಸಮಿತಿಯ ಮುಖಂಡೆ ಯಮುನ ಮಾತನಾಡಿ, ಕಳೆದ ವರ್ಷದ ಪ್ರವಾಹದಲ್ಲಿ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗುಹ್ಯ, ಕರಡಿಗೋಡು ಭಾಗದ ನೂರಾರು ಮನೆಗಳು ನೆಲಸಮವಾಗಿದ್ದು, ನೂರಾರು ಸಂತ್ರಸ್ತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಸಂತ್ರಸ್ತರಿಗೆ ಶೀಘ್ರದಲ್ಲಿ ಶಾಶ್ವತ ಸೂರು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು, ಜಿಲ್ಲಾಡಳಿತ ಭರವಸೆಯನ್ನು ನೀಡಿತ್ತು. 2019 ರ ಸೆಪ್ಟೆಂಬರ್ 30 ರಂದು ಸಿದ್ದಾಪುರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಮೂರು ತಿಂಗಳಲ್ಲಿ ಶಾಶ್ವತ ನಿವೇಶನ ಒದಗಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆಯನ್ನು ನೀಡಿದ್ದು, ಇದೀಗ ಭರವಸೆ ಕೊಟ್ಟು ನಾಲ್ಕು ತಿಂಗಳು ಕಳೆದರೂ ಸಂತ್ರಸ್ತರಿಗೆ ಸೂರು ಒದಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಡಳಿತದ ಯಾವುದೇ ಭರವಸೆಯ ಮಾತುಗಳು ಬೇಕಾಗಿಲ್ಲ. ಸಂತ್ರಸ್ತರಿಗೆ ಸೂರು ಒದಗಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದರು.

ಸಮಿತಿಯ ಪ್ರಮುಖರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಸೋಮವಾರಪೇಟೆ ತಾಲ್ಲೂಕಿನಲ್ಲಿ ತ್ವರಿತ ಗತಿಯಲ್ಲಿ ನಿವೇಶನ ಪ್ರಕ್ರಿಯೆ ನಡೆಯುತ್ತಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಸಿದ್ದಾಪುರ ಭಾಗದಲ್ಲಿ ಸರಕಾರಿ ಭೂಮಿ ಇದ್ದರೂ, ಕಂದಾಯ ಇಲಾಖೆ ಭೂಮಿಯನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸುವಲ್ಲಿ ವಿಳಂಭ ನೀತಿಯನ್ನು ಅನುಸರಿಸುತ್ತಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬಾಡಿಗೆ ಹಣವಾಗಿ ರೂ 5 ಸಾವಿರ ನೀಡುವುದಾಗಿ ಸರಕಾರ ತಿಳಿಸಿದ್ದು, ಬಾಡಿಗೆ ಹಣವನ್ನು ನಂಬಿಕೊಂಡು ಬಾಡಿಗೆ ಮನೆಯಲ್ಲಿ ಕೆಲವು ಸಂತ್ರಸ್ತರು ವಾಸವಾಗಿದ್ದಾರೆ. ಆದರೆ ಸಂತ್ರಸ್ತರಿಗೆ ಬಾಡಿಗೆ ಹಣವೂ ಕೂಡ ಲಭ್ಯವಾಗಿಲ್ಲ ಎಂದು ಆರೋಪಿಸಿದರು.
ಸರಕಾರ, ಜಿಲ್ಲಾಡಳಿತ, ತಾಲ್ಲೂಕಾಡಳಿತ ಹಾಗೂ ಗ್ರಾಮ ಪಂಚಾಯತಿ ಆಡಳಿತದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದ್ದು, ಸಂತ್ರಸ್ತರ ಪೈಕಿ ಸಂಪೂರ್ಣ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದರು. ಈಗಾಗಲೇ ಸಂತ್ರಸ್ತರ ಪಟ್ಟಿಗಳನ್ನು ತಯಾರಿಸಿದ್ದು, ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳನ್ನು ಎ ಪಟ್ಟಿಯಲ್ಲಿ ಹಾಗೂ ಭಾಗಶಃ ಹಾನಿಗೊಳಗಾದ ಸಂತ್ರಸ್ತರನ್ನು ಬಿ ಪಟ್ಟಿಯಲ್ಲಿ ಹಾಗೂ ಸಣ್ಣ ಪುಟ್ಟ ಹಾನಿಗೊಳಗಾದ ಮನೆಗಳನ್ನು ಸಿ ಪಟ್ಟಿಯಲ್ಲೂ ಸೇರ್ಪಡೆಗೊಳಿಸಲಾಗಿದೆ. ಎ ಪಟ್ಟಿಯಲ್ಲಿರುವ ಸಂಪೂರ್ಣ ಮನೆ ಕಳೆದುಕೊಂಡಿರುವ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ರೂ. 5 ಲಕ್ಷಗಳನ್ನು ಮನೆ ನಿರ್ಮಾಣಕ್ಕೆ ಪಂಚಾಯಿತಿಯ ಮುಖಾಂತರ ಜಿ.ಪಿ.ಎಸ್ ಮಾಡುವ ಮೂಲಕ ಫಲಾನುಭವಿಗಳ ಖಾತೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದೆಂದು ತಿಳಿಸಿದರು. ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರಿಗೆ ಈಗಾಗಲೇ ಜಾಗಗಳನ್ನು ಗುರುತಿಸಿದ್ದು, ಮುಂದಿನ 15 ದಿನಗಳೊಳಗೆ ಪುನರ್ವಸತಿ ಕಲ್ಪಿಸಲು ನಿವೇಶನವನ್ನು ಹಂಚಿಕೆ ಮಾಡಲಾಗುವುದೆಂದು ಭರವಸೆಯನ್ನು ನೀಡಿದರು. ನಿವೇಶನವನ್ನು ಹಂಚಿಕೆ ಮಾಡಿದ ಬಳಿಕ ಸಂತ್ರಸ್ತರಿಗೆ ಆ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲು ರೂ. 50 ಸಾವಿರ ನೀಡಲಾಗುವುದೆಂದು ತಿಳಿಸಿದರು. ಅಧಿಕೃತ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು ಅಲ್ಲದೇ ಬಾಡಿಗೆದಾರರಿಗೂ ಕೂಡಾ ಬಾಡಿಗೆ ಹಣ ನೀಡಲಾಗಿದೆ ಅನಧಿಕೃತ ಮನೆಗಳ ಸಂತ್ರಸ್ತರಿಗೆ ಬಾಡಿಗೆ ಹಣದ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಜಾಗವನ್ನು ಬಡಾವಣೆ ರೀತಿಯಲ್ಲಿ ರೂಪಿಸಲಾಗುವುದು. ಮುಂದಿನ 15 ದಿನದೊಳಗೆ ಸಂತ್ರಸ್ತರಿಗೆ ನಿವೇಶನ ಗುರುತಿಸಿ ಪಟ್ಟಣ ಯೋಜನಾ ಅಧಿಕಾರಿಗಳ ಮೂಲಕ ನಕಾಶೆ ರೂಪಿಸಲಾಗುವುದೆಂದು ತಿಳಿಸಿದರು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಜಾಗದಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು.

 ಆದರೆ ಸಂತ್ರಸ್ತರು ಇದಕ್ಕೆ ಒಪ್ಪದೇ ಉಪವಿಭಾಗಾಧಿಕಾರಿ ರವರ ಭರವಸೆ ನಮಗೆ ಬೇಕಾಗಿಲ್ಲ. ಜಿಲ್ಲಾಧಿಕಾರಿಗಳು ನೀಡಿದ ಭರವಸೆಗಳ ಅವಧಿಯು ಕಳೆದರೂ ಕೂಡಾ ಈವರೆಗೂ ಆಸಕ್ತಿ ವಹಿಸದೇ ಜಿಲ್ಲಾಡಳಿತದ ಕ್ರಮ ತಮಗೆ ವಿಶ್ವಾಸವಿಲ್ಲವೆಂದು ಸಂತ್ರಸ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಪಂಚಾಯಿತಿ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಪ್ರತಿಭಟನಾಗಾರರ ಪ್ರಮುಖರ ನಡುವೆ ಚರ್ಚೆ ನಡೆಯಿತು. ಸಭೆಯು ವಿಫಲಗೊಂಡ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ಮುಂದುವರೆಸುವುದಾಗಿ ಹೋರಾಟಗಾರರು ತಿಳಿಸಿದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಕೆಯನ್ನು ನೀಡಿದ್ದಾರೆ. 


ಸ್ಥಳದಲ್ಲಿ ಗಂಜಿ: ಪ್ರತಿಭಟನಾಗಾರರಿಗೆ ಪಂಚಾಯಿತಿ ಕಚೇರಿಯ ಬದಿಯಲ್ಲಿ ಸಂತ್ರಸ್ತರೇ ಸೇರಿ ಗಂಜಿ ತಯಾರಿಸಿ ನೀಡಿದರು. ಗಂಜಿಯೊಂದಿಗೆ ಉಪ್ಪಿನ ಕಾಯಿ ಸೇವಿಸಿ ಊಟ ಮಾಡಿ ಪ್ರತಿಭಟನೆಯನ್ನು ಮುಂದುವರೆಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಬಿಸಿಲಿನಲ್ಲಿ ಕುಳಿತು ಭಾಗವಹಿಸಿದರು.    

 
ಪ್ರತಿಭಟನೆಗಾರರು" ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ ಭಿಕ್ಷೆಯಲ್ಲ". "ಪಂಚಾಯಿತಿಗೆ ಧಿಕ್ಕಾರ, ಭರವಸೆ ಮಾತು ಬೇಕಾಗಿಲ್ಲ, ಶಾಶ್ವತ ಸೂರು ಕಲ್ಪಿಸಿಕೊಡಿ "ಇತ್ಯಾದಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಸಭೆಯಲ್ಲಿ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಬೈಜು, ಕೃಷ್ಣ, ಮುಸ್ತಫಾ ಸಿದ್ದಾಪುರ ಗ್ರಾ.ಪಂ ಸದಸ್ಯರುಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು. 
ಅಧಿಕಾರಿಗಳಾದ ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್ ಮಹೇಶ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ರಮೇಶ್, ಗ್ರಾಮಲೆಕ್ಕಿಗರಾದ ಓಮಪ್ಪ ಬಣಾಕರ್, ಅನೀಶ್, ಪಿ.ಡಿ.ಓ. ವಿಶ್ವನಾಥ್ ಇನ್ನಿತರರು ಹಾಜರಿದ್ದರು.
Previous Post
Next Post

0 Post a Comment: