ಫಲಪುಷ್ಪ ಪ್ರದರ್ಶನ; ಹೂಗಳಿಂದ ಆಕರ್ಷಿಸುತ್ತಿರುವ ರಾಜಾಸೀಟು ಉದ್ಯಾನವನ

       ಮಡಿಕೇರಿ TOC:-ಮಂಜಿನ ನಗರಿ ಎಂದರೆ ತಕ್ಷಣ ನೆನೆಪಿಗೆ ಬರುವುದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ. ಹಚ್ಚ ಹಸಿರ ಮೈಸಿರಿಯಿಂದಲೇ ಕೊಡಗು ರಾಜ್ಯದಲ್ಲೇ ವಿಶೇಷ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೆ ಹಲವಾರು ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಹೆಗ್ಗಳಿಕೆ ಜಿಲ್ಲೆಗೆ ಸೇರುತ್ತದೆ. ಅಂತಹ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ರಾಜಾಸೀಟು ಉದ್ಯಾನವನವು ನಗರದ ಹೃದಯ ಭಾಗದಲ್ಲಿದ್ದು, ಎಲ್ಲಾ ಸಮಯದಲ್ಲಿಯು ತಂಪಾದ ವಾತಾವರಣದಿಂದ ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ಇದೀಗ ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಹೂಗಳಿಂದ ಅಲಂಕೃತಗೊಂಡು ಮತ್ತಷ್ಟು ಆಕರ್ಷಿಸುತ್ತಿದೆ.  
 ರಾಜಾಸೀಟು ಉದ್ಯಾನವನವು ವಿಶೇಷ ಹಾಗೂ ವಿಶಿಷ್ಟವಾದ ಉದ್ಯಾನವನವಾಗಿದ್ದು, ಇಲ್ಲಿ ಪ್ರಮುಖವಾದ ಆಕರ್ಷಣೆಯೆಂದರೆ ಸೂರ್ಯಾಸ್ತಮಾನ. ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ಸ್ಥಳವು ಐತಿಹಾಸಿಕ ಹಿನ್ನೆಲೆಯ ಸಂಕೇತವಾಗಿದೆ. ಐತಿಹಾಸಿಕ ಹಿನ್ನಲೆಯನ್ನು ಉದ್ಯಾನವನ ಹೊಂದಿದೆ. 
ಅಂತಯೇ ರಾಜಾಸೀಟು ಉದ್ಯಾನವನವು ಶುಕ್ರವಾರ ಸಾಮಾನ್ಯ ದಿನಗಳಿಗಿಂತ ವಿಶೇಷವಾಗಿ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಫಲಪುಷ್ಪ ಪ್ರದರ್ಶನದ ಹಿನ್ನಲೆಯಿಂದಾಗಿ ಉದ್ಯಾನವನವು ಸಂಪೂರ್ಣವಾಗಿ ಹೂಗಳಿಂದ ಅಲಂಕಾರಗೊಂಡು ಒಂದು ರೀತಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಹಲವಾರು ಬಗೆಯ ಹೂವಿನಾಕಾರದ ಕಲಾಕೃತಿಗಳು ಹಾಗೂ ಪ್ರಮುಖವಾಗಿ ಕೊಡಗಿನ ಹಿಂದಿನ ಕಾಲದ ಸಾಂಪ್ರದಾಯಿಕ  ಐನ್‍ಮನೆಯು ವಿವಿಧ ಹೂಗಳಿಂದ ಅಲಂಕೃತಗೊಂಡು ನೋಡುಗರಲ್ಲಿ ಸಂತಸ ಉಂಟುಮಾಡುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿಯೂ ತರಕಾರಿ ಮತ್ತು ಹಣ್ಣುಗಳಿಂದ ಕೆತ್ತನೆ ಮಾಡಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಬಸವೇಶ್ವರ, ಸುಭಾಷ್ ಚಂದ್ರಬೋಸ್, ಸರ್ದಾರ್ ವಲ್ಲಭಾ ಬಾಯಿ ಪಟೇಲ್, ರಾಮಕೃಷ್ಣ ಪರಮಹಂಸ, ಫೀಲ್ದ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೇಮನೆ ಅಪ್ಪಯ್ಯ ಗೌಡ, ಅಪ್ಪಚ್ಚು ಕವಿ, ಕುವೆಂಪು, ಶಿವಕುಮಾರ ಶ್ರೀಗಳು, ಪೇಜಾವರ ಶ್ರೀಗಳು, ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಚಿತ್ರಗಳು, ಕೊಡಗಿನ ಪರಂಪರೆ ಪ್ರತಿಬಿಂಬಿಸುವ ಐನ್‍ಮನೆ ಸೇರಿದಂತೆ ಇನ್ನಿತರ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು, ಗಮನ ಸೆಳೆಯುತ್ತಿವೆ. 
ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು ಎಂದರೆ. ಕೊಡಗಿನ ಹಿಂದಿನ ಕಾಲದ ಸಾಂಪ್ರದಾಯಿಕ ಐನ್ ಮನೆಯ ಕಲಾಕೃತಿಯನ್ನು 12 ಅಡಿ ಎತ್ತರದಲ್ಲಿ 20 ಅಡಿ ಉದ್ದ 10 ಅಡಿ ಅಗಲದಲ್ಲಿ ವಿವಿಧ ಹೂವುಗಳಿಂದ ನಿರ್ಮಾಣ ಮಾಡಿರುವುದು, ಕೊಡಗಿನ ಮುಖ್ಯ ಬೆಳೆ ಕಾಫಿಯನ್ನು ಪ್ರತಿಬಿಂಭಿಸಲು ಕಾಫಿ ಕೆಟಲ್‍ನ ಹೂವಿನ ಕಲಾಕೃತಿಯಲ್ಲಿ ನಿರ್ಮಾಣ ಮಾಡಿರುವುದು, ಚಂದ್ರಯಾನ ಉಪಗ್ರಹ ಮಾದರಿಯನ್ನು ಹೂವಿನ ಕಲಾಕೃತಿಯಲ್ಲಿ ನಿರ್ಮಾಣ ಮಾಡಿರುವುದು. ಮಕ್ಕಳಿಗೆ ಮನರಂಜನೆ ನೀಡುವಂತಹ ಮಿಕ್ಕಿ ಮೌಸ್, ಡೊನಾಲ್ಡ್ ಡಕ್ಕ್, ಪೆÇೀಟೋ ಪ್ರೇಮ್ ಮತ್ತು ಸೆಲ್ಫಿ ಜೋನ್ ಮಾದರಿಯನ್ನು ಹೂವು ಮತ್ತು ಎಲೆಗಳಿಂದ ನಿರ್ಮಾಣ ಮಾಡಿರುವುದು, ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ ಹಾಗೂ ಹಣ್ಣುಗಳಲ್ಲಿ  ಕೆತ್ತನೆ ಮಾಡುವುದು, ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಹಾಗೂ ಅಂಥೋರಿಯಂ ಹೂವಿನ ಪ್ರದರ್ಶಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ರಾಜಾಸೀಟು ಮಂಟಪವನ್ನು ಹಾಗೂ ಮುಂಭಾಗದ ಮುಖ್ಯದ್ವಾರವನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದೆ. 
ಇದರೊಂದಿಗೆ ಗಾಂಧಿ ಮೈದಾನದಲ್ಲಿ ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ  ಕೃಷಿ ಪರಿಕರಗಳ ಪ್ರದರ್ಶನ, ತೋಟಗಾರಿಕೆ, ಕೃಷಿ, ಕೃಗಾರಿಕೆ ವಾಣಿಜ್ಯ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆಯನ್ನು ಆಯೋಜಿಸಲಾಗಿದೆ. ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳ ಪ್ರದರ್ಶಿಕೆ ಏರ್ಪಡಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನವನ್ನು ಸಹ ನೀಡಲಾಗುತ್ತದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 10 ರಿಂದ 12000 ಸಂಖ್ಯೆಯ ಹದಿನೈದರಿಂದ ಇಪ್ಪತ್ತು ಜಾತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ,  ಚಂಡುಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ನಾಟಿ ಮಾಡಲಾಗಿದೆ. 
ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣಹೂ ಜೋಡಣೆ, ಬಿಡಿಹೂಗಳ ಜೋಡಣೆ, ಇಕೆಬಾನೆ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.
Previous Post
Next Post

0 Post a Comment: