ಸಿದ್ದಾಪುರದಲ್ಲಿ ಸಿಪಿಎಂ ಪಕ್ಷದಿಂದ ಸಿ.ಎ.ಎ ಹಾಗೂ ಎನ್.ಪಿ.ಆರ್ ವಿಚಾರ ಸಂಕಿರಣ

ಪೌರತ್ವ ಮಾನವ ಹಕ್ಕಾಗಿದೆ, ಭಿಕ್ಷೆಯಲ್ಲ: ಜಯರಾಜನ್

ಸಿದ್ದಾಪುರ, ಫೆ.15: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್.ಪಿ.ಆರ್ ಕುರಿತು ವಿಚಾರ ಸಂಕಿರಣ ಮತ್ತು ಸಭೆ ಸಿದ್ದಾಪುರದ ಎಸ್.ಎಸ್.ಡಿ.ಪಿ ಸಭಾಂಗಣದಲ್ಲಿ ನಡೆಯಿತು.

ಸಿಪಿಎಂ ಪಕ್ಷದ ಪಕ್ಷದ ಗ್ರಾಮ ಸಮಿತಿಯ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಎಂ.ವಿ. ಜಯರಾಜನ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರವು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಇತ್ತೀಚೆಗೆ ಜಾರಿಗೆ ತಂದಿರುವ ಸಿ.ಎ.ಎ. ಹಾಗೂ ಎನ್.ಆರ್.ಸಿ. ಕಾಯ್ದೆಯು ಅದರ ಭಾಗವಾಗಿದೆ ಎಂದ ಅವರು, ಪೌರತ್ವವು ದೇಶದ ಜನರ ಹಕ್ಕಾಗಿದೆ ಅಲ್ಲದೆ ಸರಕಾರದ ಭಿಕ್ಷೆಯಲ್ಲ. ಕೇಂದ್ರ ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಗುತಿಯಾಗಿಸಿ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿರುವುದರ ಹಿಂದೆ ಫ್ಯಾಸಿಸ್ಟ್ ಅಜೆಂಡಾ ಅಡಗಿದೆ ಎಂದು ಆರೋಪಿಸಿದರು. ಈ ಕಾಯ್ದೆಯನ್ನು ವಿರೋಧಿಸುತ್ತಿರುವವರನ್ನು ಕೇಂದ್ರದ ಗೃಹ ಸಚಿವರು ಹಾಗೂ ಪ್ರಧಾನಿಗಳು ಭಯೋತ್ಪಾದಕರು ಮತ್ತು ದೇಶದ್ರೋಹಿಗಳೆಂದು ಟೀಕಿಸುತ್ತಿರುವುದು ಖಂಡನೀಯ ಎಂದರು.
ಕೊಡಗು ಪ್ರಗತಿಪರ ಜನಾಂದೋಲನ ವೇದಿಕೆಯ ಪ್ರಮುಖರಾದ ವಿ.ಪಿ. ಶಶಿಧರ್ ಮಾತನಾಡಿ, ಬಿಜೆಪಿ ಪಕ್ಷವು ನಿರಂತರದ ಅಧಿಕಾರ ವ್ಯಾಮೋಹದಲ್ಲಿ ಮುಂದುವರೆಯಲು ಕೇಂದ್ರ ಸರ್ಕಾರವು ಇತ್ತೀಚೆಗೆ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಟೀಕಿಸಿದರು. ಹಿಂದೂ ಧರ್ಮದ ಹೆಸರಿನಲ್ಲಿ ಮತ್ತೊಂದು ಧರ್ಮದ ಮೇಲೆ ಅಪಪ್ರಚಾರ ಮಾಡಿ ಮುಸ್ಲಿಂ ಜನಾಂಗದ ಮೇಲೆ ದ್ವೇಷ ಸಾಧಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷವು ಮತ ಬ್ಯಾಂಕಿಗಾಗಿ ಪೌರತ್ವವನ್ನು ಜಾರಿಗೆ ತರುವ ಮೂಲಕ ಹುನ್ನಾರ ನಡೆಸಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ದೂರಿದರು.

 ಈ ಸಂದರ್ಭ ಪಕ್ಷದ ಕಣ್ಣೂರು ಜಿಲ್ಲಾ ಮುಖಂಡರಾದ ಶ್ರೀಧರನ್ ಹಾಗೂ ಕೊಡಗು ಜಿಲ್ಲಾ ಮುಖಂಡ ಡಾ. ಐ.ಆರ್. ದುರ್ಗಾ ಪ್ರಸಾದ್ ಇತರರು ಮಾತನಾಡಿದರು.

 ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಪಿ.ಸಿ. ಹಸೈನಾರ್ ಹಾಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಹಾದ, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಮಣಿ, ಪ್ರಮುಖರಾದ ಮೂಸಾ, ಮಹದೇವ್ ಸೇರಿದಂತೆ ಮತ್ತಿತರರು ಇದ್ದರು.
Previous Post
Next Post

0 Post a Comment: