ಕೊರೊನಾ ಬಗ್ಗೆ ಭಯ ಬೇಡ ಎಚ್ಚರ ವಹಿಸಿ: ಡಾ.ಕೆ.ಮೋಹನ್

     ಮಡಿಕೇರಿ TOC:-ಚೀನಾ ಸೇರಿದಂತೆ ಹತ್ತಿರದ ರಾಷ್ಟ್ರಗಳಿಂದ ಬರುವ ಪ್ರವಾಸಿಗರ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.
   ನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಕೊರೊನಾ ವೈರಸ್ ಸೋಂಕಿತರ ನಿರ್ವಹಣೆ ಮತ್ತು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 
     ಚೀನಾ ದೇಶದಲ್ಲಿ ಕೊರೊನಾ ವೈರಸ್ ಸಾಕಷ್ಟು ಜೀವಹಾನಿಯನ್ನುಂಟು ಮಾಡಿದೆ. ಕೇರಳ ರಾಜ್ಯದಲ್ಲಿಯೂ ಸಹ 3 ಜನ ಸೋಂಕಿತರಿರುವುದು ಈಗಾಗಲೇ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಕೇರಳ ಗಡಿಗೆ ಹೊಂದಿಕೊಂಡಂತೆ ಕೊಡಗು ಜಿಲ್ಲೆಯೂ ಸಹ ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು. 
     ಜನರಲ್ಲಿ ಇದು ಸಾಮಾನ್ಯವಾಗಿ ಶೀತ ಮತ್ತು ಕೆಮ್ಮು ಇರುವ ಕಾಲ. ಹೀಗಾಗಿ ಚೀನಾ ಸೇರಿದಂತೆ 23 ರಾಷ್ಟ್ರಗಳಿಂದ ಬಂದಿರುವವರ ಬಗ್ಗೆ ಹಾಗೂ ಶೀತ, ಕೆಮ್ಮಿನಿಂದ ಅವರು ಅನಾರೋಗ್ಯ ಪೀಡಿತರಾಗಿದ್ದರೆ, ಅಂತಹವರ ಬಗ್ಗೆ ತೀವ್ರ ನಿಗಾ ವಹಿಸಿ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
     ಯಾವುದೇ ಹಂತದಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟರೆ, ಅವರ ಬಗ್ಗೆ ಗೌಪ್ಯತೆ ಕಾಪಾಡಬೇಕು. ಹಿರಿಯ ಅಧಿಕಾರಿಗಳ ಬಳಿಯಲ್ಲಿ ಮಾತ್ರವೇ ಈ ವಿಚಾರವನ್ನು ಪ್ರಸ್ತಾಪಿಸಬೇಕು ಎಂದರು.
      ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೂ ಸಹ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸೋಂಕಿತ ವ್ಯಕ್ತಿಯಿಂದ ಕನಿಷ್ಠ 6 ಅಡಿ ದೂರದಲ್ಲಿ ನಿಂತು ಮಾತನಾಡಬೇಕು. ಸೋಂಕಿತರನ್ನು ಸ್ಪರ್ಶಿಸಿದ ಬಳಿಕ ಸಾಬೂನಿನಲ್ಲಿ ಕೈಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು  ನಂತರ ನಿಮ್ಮ ಕಣ್ಣು ಮತ್ತು ಬಾಯಿಯನ್ನು ಸ್ಪರ್ಶಿಸಬೇಕು. ಯಾರಾದರು ತೀವ್ರ ರೀತಿಯಲ್ಲಿ ಕೆಮ್ಮುತ್ತಿದ್ದರೆ. ಅವರಿಗೆ ಕೆಮ್ಮುವ ಸಂದರ್ಭ ಕರವಸ್ತ್ರವನ್ನು ಅಡ್ಡ ಹಿಡಿಯುವಂತೆ ಸಲಹೆ ಮಾಡಬೇಕು ಎಂದರು.
      ಕೊರೊನಾ ವೈರಸ್ ಬಗ್ಗೆ ಭಯ ಬೀಳುವ ಅಗತ್ಯವಿಲ್ಲ. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.
      ಜನರಲ್ಲಿ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್‍ಇಡಿ ವಾಹನ ಸಂಚಾರವನ್ನೂ ಸಹ ಆರಂಭಿಸಿದ್ದು, ಗೋಣಿಕೊಪ್ಪಲುವಿನಲಿ,್ಲ ವಿರಾಜಪೇಟೆ ತಾಲೂಕು ಮಟ್ಟದ ಮತ್ತು ಕುಶಾಲನಗರದಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
      ಕಾರ್ಯಕ್ರಮದಲ್ಲಿ ಆರ್.ಸಿ.ಎಚ್ ಅಧಿಕಾರಿ ಡಾ.ಗೋಪಿನಾಥ್, ಮಡಿಕೇರಿ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಭಾಗಿಯಾಗಿದ್ದರು.
Previous Post
Next Post

0 Post a Comment: