ಮಡಿಕೇರಿ TOC:-ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿ ಕೊಂಡಗೇರಿಯ ಒಬ್ಬರಿಗೆ (35) ಕೊರೊನಾ ವೈರಸ್ ಪಾಸಿಟಿವ್ ದÀೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು. ದುಬೈನಿಂದ ಬೆಂಗಳೂರಿಗೆ ಮಾರ್ಚ್ 15 ರಂದು ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.30 ಗಂಟೆಗೆ ಆಗಮಿಸಿದ್ದಾರೆ. ನಂತರ ಬೆಂಗಳೂರಿನಿಂದ ಮೈಸೂರು ಮಾರ್ಗ ರಾಜಹಂಸ ಬಸ್ ಮೂಲಕ ಮಡಿಕೇರಿಗೆ ಆಗಮಿಸಿ ಬಳಿಕ ಆಟೋ ಮೂಲಕ ಮನೆ ತಲುಪಿದ್ದಾರೆ, ನಂತರ ಕೆಮ್ಮು, ನೆಗಡಿ ಲಕ್ಷಣ ಕಂಡುಬಂದಿದ್ದು, ಮಾರ್ಚ್ 17 ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಸಂದರ್ಭದಲ್ಲಿ ಶಂಕಿತರ ರಕ್ತ ಪರೀಕ್ಷೆಯನ್ನು ಮೈಸೂರಿಗೆ ಕಳುಹಿಸಿ ಕೊಡಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇದೆ ಎಂದು ಮಾರ್ಚ್ 19 ರಂದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯನ್ನು ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಂಡಿದ್ದು, ಇವರು ಪ್ರಯಾಣಿಸಿದ ವಿಮಾನ ಮತ್ತು ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರ ವಿವರವನ್ನು ಕಲೆಹಾಕುತ್ತಿದ್ದು ಮತ್ತು ಬಸ್‍ನಲ್ಲಿ ಬರುವಾಗ ಮೈಸೂರು ಮಾರ್ಗದಲ್ಲಿ ಊಟಕ್ಕೆ ನಿಲ್ಲಿಸಿದ ಸ್ಥಳ ಮತ್ತಿತರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೊಂಡಗೇರಿ ಗ್ರಾಮದಲ್ಲಿನ ಸ್ವಗ್ರಾಮದಲ್ಲಿ 75 ಕುಟುಂಬಗಳಿದ್ದು, 306 ಜನರು ವಾಸಿಸುವ 500 ಮೀಟರ್ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವೆಂದು ಹಾಗೂ 500 ಮೀಟರ್ ಹೊರತುಪಡಿಸಿ ಈ ಪ್ರದೇಶದಲ್ಲಿನ ಜನರುಗಳು ಇತರೆ ಜನರೊಂದಿಗೆ ಸಂಪರ್ಕವನ್ನು ನಿರ್ಭಂದಿಸಿದ್ದು, ಇವರಿಗೆ ಜಿಲ್ಲಾಡಳಿತವು ದಿನ ನಿತ್ಯದ ಅಗತ್ಯ ಊಟೋಪಚಾರ ವ್ಯವಸ್ಥೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಕೊರೊನಾ ವೈರಸ್ ಎದುರಿಸಲು ಮತ್ತು ತಡೆಗೆ, ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ. ಕೊರೊನಾ ವೈರಸ್ ಸೋಂಕಿತ ಒಂದು ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಯ ಐಸೊಲೇಟೆಡ್ ವಾರ್ಡ್, 50 ಹಾಸಿಗೆಯ ಕೋರೆಂಟಲ್ ವಾರ್ಡ್ ಸಿದ್ಧ್ದವಾಗಿದ್ದು, ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಠಿಯಿಂದ ಜಿಲ್ಲೆಯಲ್ಲಿ 144(3) ಸೆಕ್ಷನ್ ಕೂಡ ಜಾರಿಯಲ್ಲಿದ್ದು ರೆಸಾರ್ಟ್, ಹೊಟೇಲ್, ಹೋಮ್ ಸ್ಟೇ ಬುಕಿಂಗ್ ರದ್ದು ಪಡಿಸುವುದು, ಹೊಸ ಬುಕ್ಕಿಂಗ್ ಮಾಡುವುದು ಸಂಪೂರ್ಣವಾಗಿ ಮಾರ್ಚ್ 31 ರ ವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯ ವಿವಿಧ ರೆಸಾರ್ಟ್‍ಗಳಲ್ಲಿ ಜರ್ಮನಿಯ ಇಬ್ಬರು, ಆಸ್ಟ್ರಿಯಾ ದೇಶದ ಒಬ್ಬ ಪ್ರಜೆ ಇವರೊಂದಿಗೆ ಭಾರತದ ಇಬ್ಬರು ಸ್ನೇಹಿತರು ನೆಲೆಸಿದ್ದು, ಮುಂಜಾಗೃತಾ ಕ್ರಮವಾಗಿ ಇವರನ್ನು ಉಳಿದುಕೊಂಡಿರುವ ರೆಸಾರ್ಟ್‍ನಲ್ಲಿಯೇ 15 ದಿನಗಳ ಕಾಲ ತಂಗಲು ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಅವರು ಹೇಳಿದರು.
ಕೊರೊನಾ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದ್ದು ಉಪ ವಿಭಾಗಾಧಿಕಾರಿ, ಐಟಿಡಿಪಿ ಇಲಾಖೆ ಅಧಿಕಾರಿ, ಕೃಷಿ ಇಲಾಖೆಯ ಉಪ ನಿರ್ದೇಶಕರನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗಿದೆ ಎಂದರು.
ಧಾರ್ಮಿಕ ಸ್ಥಳಗಳಲ್ಲಿ ದಿನ ನಿತ್ಯದ ಪೂಜಾ ಕೈಂಕರ್ಯಗಳಿಗೆ ಯಾವುದೇ ರೀತಿಯ ನಿರ್ಭಂಧವಿರುವುದಿಲ್ಲ ಆದರೆ ದೊಡ್ಡ ಮಟ್ಟದ ಜಾತ್ರೆ, ದಾರ್ಮಿಕ ಚಟುವಟಿಕೆಗಳು, ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು..
ಶಾಲಾ-ಕಾಲೇಜು ಅಂಗನವಾಡಿ, ಜಿಮ್, ಈಜುಕೊಳ, ಮೈದಾನ, ಮನೆಪಾಠ ಕೇಂದ್ರಗಳು ಮಾರ್ಚ್ 31ರ ವರೆಗೆ ಮುಚ್ಚಿರುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಭೇಟಿಯನ್ನು ನಿರ್ಭಂದಿಸಿದ್ದು ಸಾರ್ವಜನಿಕರ ಅಗತ್ಯ ಕೆಲಸಗಳಿಗೆ ದೂರವಾಣಿ, ಇ-ಮೇಲ್, ವಾಟ್ಸ್‍ಆಪ್, ಅಂಚೆ ಮೂಲಕ ಪತ್ರ ವ್ಯವಹಾರಕ್ಕೆ ಯಾವುದೇ ನಿರ್ಭಂಧವಿರುವುದಿಲ್ಲ. ಆದುದರಿಂದ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.
ಸಂತೆ, ಜಾತ್ರೆ ಸೇರಿದಂತೆ ಜನ ಸೇರುವುದನ್ನು ನಿμÉೀಧಿಸಲಾಗಿದ್ದು. ಜಿಲ್ಲೆಯ ಗಡಿಗಳಲ್ಲಿ ಚೆಕ್ ಫೋಸ್ಟ್ ತೆರೆದು ಪರಿಶೀಲನೆ ಮಾಡಲಾಗುತ್ತಿದೆ, ಔಷಧಿ, ದಿನಸಿ ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸುವುದು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರಿಗೆ ಎಲ್ಲಾ ರೀತಿಯ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಇದ್ದರು.
0 Post a Comment: