ಮಡಿಕೇರಿ (TIMES OF COORG) : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪ್ರತಿಭೋತ್ಸವದ ಸಂಭ್ರಮ ಮನೆ ಮಾಡಿತ್ತು. ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು. ವೇದಿಕೆ ಕಾರ್ಯಕ್ರಮ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಹಪಠ್ಯ ಚಟುವಟಿಕೆಗಳ ಸಮಿತಿ ವತಿಯಿಂದ ವಿದ್ಯಾರ್ಥಿಗಳೇ ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.
ನಿರುಪಯುಕ್ತ ಬಟ್ಟೆ, ಕಾಗದ ಮುಂತಾದ ವಸ್ತುಗಳನ್ನು ಬಳಸಿ ವಿದ್ಯಾರ್ಥಿಗಳೇ ಕ್ರಿಯಾತ್ಮಕ ವಸ್ತುಗಳನ್ನು ತಯಾರಿಸಿ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು.
ವಸ್ತು ಪ್ರದರ್ಶನದಲ್ಲಿ ಮದರ್ ತೆರೇಸಾ ಅವರ ಪೆನ್ಸಿಲ್ ಸ್ಕೆಚ್, ಕ್ರಿಸ್ಮಸ್ ಹಬ್ಬವನ್ನು ಪ್ರತಿಬಿಂಬಿಸುವ ಸಾಂತ ಕ್ಲಾಸ್, ಕ್ರಿಸ್ಮಸ್ ಟ್ರೀ ಗಳು, ಗೋಣಿಚೀಲವನ್ನು ಬಳಸಿ ತಯಾರಿಸಲಾಗಿದ್ದ ಹ್ಯಾಂಡ್ ಬ್ಯಾಗ್, ಗಾಜಿನ ಮೇಲೆ ಬಿಡಿಸಲಾಗಿದ್ದ ಚಿತ್ತಾಕರ್ಷಕ ಕಲಾಕೃತಿಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು.
ಬಹುತೇಕ ನಿರುಪಯುಕ್ತ ವಸ್ತುಗಳನ್ನೇ ಬಳಸಿಕೊಂಡು ಕಾಲೇಜಿನ ವಿದ್ಯಾರ್ಥಿಗಳು ಕಸದಿಂದ ರಸ ಮಾಡುವ ಬಗೆಯನ್ನು ಎಲ್ಲರಿಗೂ ಪರಿಚಯಿಸಿದ್ದು ವೈಶಿಷ್ಠ್ಯತೆಯಿಂದ ಕೂಡಿತ್ತು.
ತಾವೇ ತಯಾರಿಸಿದ ಕರಕುಶಲ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಮಣ್ಣಿನ ಮಡಿಕೆಯ ಮೇಲೆ ಬಿಡಿಸಲಾಗಿದ್ದ ಚಿತ್ತಾರ, ಅಲಂಕಾರಿಕ ವಸ್ತುಗಳು, ಹಳೆಯ ಬಟ್ಟೆಯನ್ನು ಬಳಸಿ ತಯಾರಿಸಿದ್ದ ಮ್ಯಾಟ್ಗಳು, ಕ್ರಿಯಾತ್ಮಕವಾಗಿ ವಿದ್ಯಾರ್ಥಿಗಳು ಬಿಡಿಸಿದ್ದ ಪ್ರಕೃತಿ ಸೌಂದರ್ಯದ ಚಿತ್ರಕಲೆಗಳು, ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡುವ ಬಣ್ಣದ ಮೀನು, ಪ್ರೀತಿಯ ಸಂಕೇತವಾದ ಕೆಂಬಣ್ಣದ ಗುಲಾಬಿ ಹೂವಿನ ಚಿತ್ರ ವಿದ್ಯಾರ್ಥಿಗಳಲ್ಲಿನ ಸೃಜನಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿತ್ತು. ಪರಿಮಳವನ್ನು ಬೀರದೆ, ಕಣ್ಣಿಗೆ ಮಾತ್ರವೇ ರಸದೌತಣ ನೀಡುತ್ತಿದ್ದ ಕಾಗದದ ಹೂವುಗಳು ಸಹ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಸಲುವಾಗಿ ಮತ್ತು ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕರಕುಶಲ ವಸ್ತು ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಗಿತ್ತು..
0 Post a Comment: