ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡು ದುಡಿಮೆ ಮಾಡಿ: ಟಿ. ಜವರೇಗೌಡ

        ಮಡಿಕೇರಿ TOC:-ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡು ದುಡಿಮೆ ಮಾಡಿ. ಯಾವುದೇ ವೃತ್ತಿ ಮೇಲು ಕೀಳು ಎಂಬ ಭಾವನೆಗಳು ಇರಬಾರದು ಎಂದು ಉಪವಿಭಾಗಾಧಿಕಾರಿಗಳಾದ ಟಿ. ಜವರೇಗೌಡ ಅವರು ತಿಳಿಸಿದರು.
   ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೆÇಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭಧ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಭಾನುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
  ಸಮಾಜದಲ್ಲಿ ಬಹಳಷ್ಟು ಕೆಳ ಸ್ತರದಲ್ಲಿ ದುಡಿಯುವ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವುದು ನಿಜಕ್ಕೂ ಸಂತಸದ ವಿಚಾರ ಮತ್ತು ಇದೊಂದು ವಿಶಿಷ್ಠ ಕಾರ್ಯಕ್ರಮ. ಎಲ್ಲರೂ ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡು ದುಡಿಮೆ ಮಾಡಬೇಕು. ಸಮಾಜದಲ್ಲಿ ಯಾವುದೇ ವೃತ್ತಿ ಮೇಲು-ಕೀಳು ಎಂಬ ಭಾವನೆಗಳು ನಮ್ಮಲ್ಲಿರಬಾರದು ಎಂದು ಅವರು ಹೇಳಿದರು
  ಸಮಾಜವೊಂದು ಪರಿಪೂರ್ಣವಾಗುವುದು ಎಲ್ಲಾ ವರ್ಗದ ಜನರ ದುಡಿಮೆಯಿಂದಲೇ ಆಗಿದೆ. ಇನ್ನು ಮುಂದೆಯೂ ಸಹ ಸಮಾಜಕ್ಕೆ ಕೊಡುಗೆ ನೀಡುವಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿ. ಕಾರ್ಮಿಕರು ಗಳಿಸಿದ್ದರಲ್ಲಿ ಸ್ವಲ್ಪ ಉಳಿಸಿ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ಈ ಮೂಲಕ ನೀವು ಕೂಡ ಮುಖ್ಯವಾಹಿನಿಗೆ ಬರಬಹುದು ಎಂದರು. ಎಂದಿಗೂ ಸಹ ದುಶ್ಚಟಗಳನ್ನು ಪಾಲಿಸದೆ ಸಮಾಜಮುಖಿಯಾಗಿರಿ ಎಂದು ಸಲಹೆ ನೀಡಿದರು.
   ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಕಾರ್ಮಿಕಾಧಿಕಾರಿಗಳಾದ ಯತ್ನಟ್ಟಿ ಅವರು, ಪ್ರತಿ ವರ್ಷದಂತೆ ಈ ವರ್ಷವು ಮಾರ್ಚ್ 1 ರಂದು ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮ ಸಮ್ಮಾನ ಮತ್ತು ವಿಶೇಷ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸನ್ಮಾನ ಕಾರ್ಯಕ್ರಮವು ಪ್ರಥಮವಾಗಿ 2019ರ ಮಾರ್ಚ್ 1 ರಂದು ಪ್ರಥಮವಾಗಿ ಆಚರಿಸಲಾಗಿತ್ತು ಎಂದು ತಿಳಿಸಿದರು.
   2018 ರಲ್ಲಿ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಾದ ಹಮಾಲರು, ಟೈಲರ್ ಗಳು , ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಚಿಂದಿ ಆಯುವವರು, ಮನೆಗೆಲಸದವರು, ಮೆಕ್ಯಾನಿಕ್, ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಂಡಳಿ ವತಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಜಿಲ್ಲೆಯಲ್ಲಿ ಇದುವರೆವಿಗೂ ಈ ವಲಯಗಳಲ್ಲಿ ಕೆಲಸ ಮಾಡುವ ಈ ವರ್ಗದ ಕಾರ್ಮಿಕರಿಂದ 1764 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ವರೆಗೆ 1067 ಸ್ಮಾರ್ಟ್ ಕಾರ್ಡ್ ಗಳು ಮಂಡಳಿಯಿಂದ ವಿತರಣೆಯಾಗಿದ್ದು, ಉಳಿದ ಸ್ಮಾರ್ಟ್ ಕಾರ್ಡ್ ಗಳನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು. 
   ಆಟೋಚಾಲಕರ ಸಂಘದ ಅಧ್ಯಕ್ಷರಾದ ಎಸ್.ಜಿ. ಮೇದಪ್ಪ ಅವರು ಮಾತನಾಡಿ, ಸಮಾಜದಲ್ಲಿ ಅಸಂಘಟಿತ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸರ್ಕಾರ ಇತ್ತೀಚಿನ ದಿನಗಳಲ್ಲಿ ಈ ವರ್ಗದ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ. ಇಲಾಖೆಯೂ ಸಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ ಎಂದು ತಿಳಿಸಿದರು.
   ಬಳಿಕ ಮಾತನಾಡಿದ ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದ್ ಅವರು, ಅಸಂಘಟಿತ ವಲಯದ ಕಾರ್ಮಿಕರು ಸಮಾಜದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸೇವೆಯನ್ನೂ ಪರಿಗಣಿಸಿ ಸನ್ಮಾನ ಮಾಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. 
   ಕಾರ್ಮಿಕ ಸಮ್ಮಾನ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಆಯ್ಕೆಯಾದ 11 ವಲಯದ ಅಸಂಘಟಿತ ಕಾರ್ಮಿಕರು ಹಾಗೂ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಆಯ್ಕೆಯಾದ 1 ವಲಯದ, ಒಟ್ಟು 90 ಜನ ಕಾರ್ಮಿಕರಿಕೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ನೀಡಿ ಗೌವರವಿಸಲಾಯಿತು.
   ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಕಾರ್ಮಿಕ ಅಧಿಕಾರಿಗಳಾದ ಎಂ. ಮಹದೇವ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಡಿಕೇರಿ ತಾಲೂಕು ಕಾರ್ಮಿಕ ಅಧಿಕಾರಿಗಳಾದ ಯತ್ನಟ್ಟಿ ಅವರು ವಂದಿಸಿದರು. ಕೊಡಗು ಜಿಲ್ಲಾ ವಿದ್ಯಾ ಸಾಗರ ಕಲಾವೇದಿಕೆಯ ಈ. ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು.
Previous Post
Next Post

0 Post a Comment: