ಮಡಿಕೇರಿ (TIMES OF COORG) : ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಸಂದರ್ಭ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿ ಪಡಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಕೊಡವ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಆಸಕ್ತಿ ತೋರಿ ಸಿಎನ್ಸಿ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ಆಂತರಿಕ ಮೀಸಲಾತಿಗಾಗಿ ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ದೇಶದ ಸಂವಿಧಾನವು ವಿವಿಧ ಜನಾಂಗ, ವಿಭಿನ್ನ ಸಂಸ್ಕøತಿ, ಹಲವಾರು ಭಾಷೆ, ಪರಂಪರೆಯನ್ನು ಸಂರಕ್ಷಿಸಲು ಹಾಗೂ ಲಿಂಗ ತಾರತಮ್ಯವಿಲ್ಲದಂತೆ ಪೋಷಿಸಲು ಕಟಿಬದ್ಧವಾಗಿದೆ. ಭಾರತೀಯ ಮಹಿಳೆಯರಿಗೆ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಬೇಕೆನ್ನುವ ಪ್ರಸ್ತಾಪ ಕಳೆದ 30 ವರ್ಷಗಳಿಂದ ಜಾರಿಯಾಗದೆ ನೆನೆಗುದಿಗೆ ಬಿದ್ದಿದೆ. ಆದರೆ ಮಹಿಳಾ ಮೀಸಲಾತಿ ಪ್ರಕ್ರಿಯೆ ಶೀಘ್ರ ಅನುಷ್ಠಾನಗೊಳ್ಳುತ್ತದೆ ಎನ್ನುವ ವಿಶ್ವಾಸ ಸಿಎನ್ಸಿ ಸಂಘಟನೆಗಿದ್ದು, ಈ ಸಂದರ್ಭ ಅತ್ಯಂತ ಸೂಕ್ಷ್ಮ ಜನಾಂಗವಾದ ಕೊಡವ ಮಹಿಳೆಯರಿಗೂ ಆಂತರಿಕ ಮೀಸಲಾತಿ ನೀಡುವ ಕುರಿತು ಗಮನ ಹರಿಸಬೇಕೆಂದು ನಾಚಪ್ಪ ಒತ್ತಾಯಿಸಿದ್ದಾರೆ.
::: ಬೇಡಿಕೆಗಳು :::
ಬಡ ಹೆಣ್ಣು ಮಕ್ಕಳ ವಿವಾಹ ವೆಚ್ಚವನ್ನು ಭರಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಸಪ್ತಪದಿ ಭಾಗ್ಯ” ಯೋಜನೆಯಂತೆ ಬಡಕೊಡವತಿ ಮದುಮಗಳಿಗೆ “ಪತ್ತಾಕ್ ಭಾಗ್ಯ”ಕಲ್ಪಿಸಬೇಕು.
ಬಡತನದ ಬೇಗೆಯಲ್ಲಿ ದಟ್ಟಕಾಡು, ಗಿರಿ ಕಂದರ, ನದಿತೊರೆಗಳ ನಡುವೆ ಸಂಕಷ್ಟದ ಬದುಕು ನಡೆಸುತ್ತಾ ಪೌಷ್ಠಿಕ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಬಡ ಕೊಡವ ಕುಟುಂಬಗಳ ಕೊಡವತಿ ಗರ್ಭಿಣಿಯರಿಗೆ ಕೊಡವ ಪರಂಪರೆಯಂತೆ ಪೌಷ್ಠಿಕ ಆಹಾರ ಒದಗಿಸಲು “ಕೂಪದಿ ಕೂಳ್ ಭಾಗ್ಯ” ಯೋಜನೆಯನ್ನು ಜಾರಿಗೆ ತರಬೇಕು.
ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಕೊಡವ ಜನಾಂಗವನ್ನು ಶೀಘ್ರ ಬುಡಕಟ್ಟು ಸಮುದಾಯವೆಂದು ಅಧಿಕೃತವಾಗಿ ಘೋಷಿಸಬೇಕು ಎಂದು ಒತ್ತಾಯಿಸಿರುವ ನಾಚಪ್ಪ, ದೇಶದ ಸಂವಿಧಾನ ನೀಡುವ ಸೌಲಭ್ಯಗಳನ್ನು ಪಡೆಯುವುದು ಹಕ್ಕೇ ಹೊರತು ಅಪರಾಧವಲ್ಲ ಎನ್ನುವುದನ್ನು ಕೊಡವ ಮಹಿಳೆಯರು ಅರಿತುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಪ್ರತಿವರ್ಷ ಮಾ.8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಮಹಿಳಾ ದಿನ ಅರ್ಥಗರ್ಭಿತವಾಗಬೇಕಾದರೆ ಕೊಡವ ಮಹಿಳೆಯರಿಗೂ ರಾಜಕೀಯ ಭದ್ರತೆ ಸಿಗಬೇಕು ಮತ್ತು ಸಂವಿಧಾನದ ಎಲ್ಲಾ ಹಕ್ಕುಗಳನ್ನು ಮೀಸಲಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.
0 Post a Comment: