ಟಿಪ್ಪು ಜಯಂತಿ ಕೇಸ್ ಗಳೇ ಹೆಚ್ಚು
ಮಡಿಕೇರಿ TOC :- ರಾಜ್ಯ ಬಿಜೆಪಿ ಸರಕಾರ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 46 ಪ್ರಕರಣಗಳನ್ನು ಹಿಂಪಡೆಯಲು ಅನುಮತಿ ನೀಡಿದೆ. ಈ 46 ಕೇಸುಗಳ ಪೈಕಿ 18 ಪ್ರಕರಣಗಳು ಕೊಡಗು ಜಿಲ್ಲೆಗೆ ಸಂಬಂಧಿಸಿವೆ. ಇವುಗಳಲ್ಲಿ ಟಿಪ್ಪು ಜಯಂತಿಯ ಸಂದರ್ಭ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳೇ ಹೆಚ್ಚಾಗಿದ್ದು, ಎರಡೂ ಕೋಮುಗಳ ಕೇಸುಗಳನ್ನು ಹಿಂಪಡೆಯಲು ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದ ಸಂದರ್ಭ ಮಾಜಿ ವಿಧಾನ ಸಭಾ ಅಧ್ಯಕ್ಷ, ಹಾಲಿ ವಿರಾಜಪೇಟೆ ಕ್ಷೇತ್ರ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಟಿಪ್ಪು ಜಯಂತಿಯ ಸಂದರ್ಭದಲ್ಲಾದ ಗಲಭೆಯಲ್ಲಿ ಅಮಾಯಕರನ್ನು ಸಿಲುಕಿಸಲಾಗಿದ್ದು ಅಂತಹ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಅಂದು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಸುತ್ತೋಲೆ ಹೊರಡಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
::: ಪ್ರಕರಣಗಳ ವಿವರ :::
ಸರಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕೆಳಕಂಡ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. 2014ರಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಬಗ್ಗೆ ನವೆಂಬರ್ 28ರಂದು ಮಡಿಕೇರಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿಯ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಜಿಲ್ಲೆಯ ಉನ್ನತ ಅರಣ್ಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಯೊಬ್ಬರು ನಗುತ್ತಿದ್ದುದನ್ನು ಪ್ರಶ್ನಿಸಿ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿರುವುದಾಗಿ ಕೆಲವರ ಮೇಲೆ ಮಡಿಕೇರಿ ನಗರ ಪೊಲೀಸರು ಮೊಕದಮ್ಮೆ ದಾಖಲಿಸಿದ್ದರು.
ಈ ಹಿಂದಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಬಾರಿಗೆ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಯೋಜಿಸಬೇಕೆಂದು ಸುತ್ತೋಲೆ ಹೊರಡಿಸಿದ್ದರು. ಇದಕ್ಕೆ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿದ್ದವು. ತದನಂತರ 2015ರ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ಸಂದರ್ಭ ವಿವಿಧ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಪಕ್ಷದ ಸದಸ್ಯರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸುವ ಸಲುವಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ದ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅದೇ ದಿನದಂದು ಕೊಡಗು ಜಿಲ್ಲಾ ಬಂದ್ಗೆ ಕರೆ ನೀಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು, ಸರಕಾರಿ ಆಸ್ಪತ್ರೆಯ ಆವರಣದಲ್ಲಿ ವಾಹನ ಒಂದಕ್ಕೆ ಬೆಂಕಿ ಹಚ್ಚಿರುವುದು, ವ್ಯಕ್ತಿಯೊಬ್ಬರಿಗೆ ಸೇರಿದ ಕಾರಿನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದರ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
2015ರ ನವೆಂಬರ್ 9ರಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಹ್ಯ ಅಗಸ್ತೇಶ್ವರ ಕಟ್ಟಡ, ನವೆಂಬರ್ 10ರಂದು ಪಾಲಿಬೆಟ್ಟದ ಖಾಸಗಿ ಬಸ್ ನಿಲ್ದಾಣ, ಕೊಂಡಂಗೇರಿಯ ಗ್ರಾಮದ ಹಾಲುಗುಂದ ಜಂಕ್ಷನ್ ಬಳಿ ಕಾನೂನು ಬಾಹಿರವಾಗಿ ಟಿಪ್ಪು ಸುಲ್ತಾನ್ ಜಯಂತಿಗೆ ಶುಭ ಕೋರಿ ಫ್ಲೆಕ್ಸ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.
2015ರ ನವೆಂಬರ್ 10ರಂದು ಸೋಮವಾರಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿತ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಸಂದರ್ಭ ಕೆಲವರು ಗಾಯಗೊಂಡಿದ್ದರು. ಗಾಯಾಳುಗಳು ನೀಡಿದ ದೂರಿನಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕೆಲವು ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಬಂದವರು ಮತ್ತು ಅದನ್ನು ವಿರೋಧಿಸಿದ ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಜಯಂತಿ ಆಚರಣೆಗೆ ಬಂದವರನ್ನು ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯುವ ಸಂದರ್ಭ ಒಂದು ಗುಂಪು ಬಸ್ಸನ್ನು ಅಡ್ಡ ತಡೆದು ಬಸ್ನ ಗಾಜುಗಳಿಗೆ ಕಲ್ಲು ಹೊಡೆದು ಹಾನಿ ಮಾಡಿದ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2015ರ ನವೆಂಬರ್ 13ರಂದು ಸೋಮವಾರಪೇಟೆಯ ವರ್ಕ್ಶಾಪ್ ಒಂದಕ್ಕೆ ಬೆಂಕಿ ಹಚ್ಚಿದ್ದು ಅಲ್ಲಿದ್ದ ಒಂದು ದ್ವಿಚಕ್ರ ವಾಹನ ಸುಟ್ಟು ಹೋಗಿತ್ತು. ಈ ಬಗ್ಗೆ ಸೋಮವಾರಪೇಟೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದರು.
2015ರ ನವೆಂಬರ್ 10ರಂದು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯುವ ಸಂದರ್ಭ ವಾಹನದ ವೈಯರಿಂಗ್ ಹಾಗೂ ಮೇಲ್ಛಾವಣಿಯ ಹೊದಿಕೆ ಹರಿದಿರುವುದು, ಕೆ.ಸ್.ಆರ್.ಟಿ.ಸಿ. ಬಸ್ನ ಸೀಟುಗಳು ಮತ್ತು ವೈಯರಿಂಗ್ ಅನ್ನು ಕಿತ್ತಿರುವುದು, ಕಾಲೂರು ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ಗೆ ಕಲ್ಲು ತೂರಿ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿ ಪೋಸ್ಟರ್ ಹಾಕಿರುವುದು, 2018ರಲ್ಲಿ ಚುನಾವಣಾ ಪ್ರಚಾರ ಸಂದರ್ಭ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವುದು, ಗೋಣಿಕೊಪ್ಪ ಪೊಲೀಸರು ದಸ್ತಗಿರಿಗೆ ಮುಂದಾದಾಗ ಪೊಲೀಸ ಭದ್ರತೆಯಿಂದ ತಪ್ಪಿಸಿಕೊಂಡು, ದಸ್ತಗಿರಿಗೆ ಪ್ರತಿರೋಧ ಒಡ್ಡಿರುವ ಪ್ರಕರಣಗಳು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ವಿವಿಧ ರೀತಿಯ ಒಟ್ಟು 18 ಕೇಸುಗಳು ದಾಖಲಾಗಿದ್ದವು.
ಸುತ್ತೋಲೆಯ ಪ್ರಕಾರ, ಅನುಬಂಧದಲ್ಲಿ ನಮೂದಿಸಿರುವ 46 ಪ್ರಕರಣಗಳನ್ನು ಸಿ.ಆರ್.ಪಿ.ಸಿ. ಕಲಂ 321 ಅಭಿಯೋಜನೆಯಿಂದ ಹಿಂಪಡೆಯಲು ಸರಕಾರ ಮಂಜೂರಾತಿ ನೀಡಿದೆ. ಮಾತ್ರವಲ್ಲದೇ, ಈ ಬಗ್ಗೆ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿರುವ ಸರಕಾರ ಅನುಬಂಧದಲ್ಲಿರುವ 46 ಪ್ರಕರಣಗಳನ್ನು ಸಂಬಂದಪಟ್ಟ ನ್ಯಾಯಾಲಯದಿಂದ ಹಿಂಪಡೆಯಲು ಅಗತ್ಯವಾದ ಅರ್ಜಿಯನ್ನು ಸಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ಆದೇಶ ಹೊರಡಿಸಲಾಗಿದೆ. ರಾಜ್ಯವ್ಯಾಪಿ ಒಟ್ಟು 46 ಪ್ರಕರಣಗಳನ್ನು ಕಾನೂನಾತ್ಮಕವಾಗಿ ಪರಿಶೀಲನೆಗೆ ಒಳಪಡಿಸಿ, ಆ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರಕಾರ ಅಧಿಕೃತವಾಗಿ ಘೋಷಿಸಿ, ಮಾ.5ರಂದು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆಯ ಅಧಿಕಾರಿ ಎಸ್.ಎನ್.ಲತಾ(ಅಪರಾಧಗಳು) ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ.
0 Post a Comment: