ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ವಿಧಾನಸೌದ ಚಲೋ ಹೋರಾಟಕ್ಕೆ ಮುಂದಾಗುವುದು: ಅಮೀನ್ ಮೊಹಿಸಿನ್

6 ನೆ ದಿನ ಪೂರೈಸಿದ ಪ್ರವಾಹ ಸಂತ್ರಸ್ತರ‌ ಅಹೋರಾತ್ರಿ ಪ್ರತಿಭಟನೆ

ಸಿದ್ದಾಪುರ (ಕೊಡಗು), ಫೆ. 15: ಶಾಶ್ವತ ಸೂರಿಗಾಗಿ ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ 6 ದಿನಗಳು ಪೂರೈಸಿದೆ. 6 ನೆ ದಿನದ ಹೋರಾಟಕ್ಕೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ. 

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದ ಅವರು, ಆದಿವಾಸಿ, ದಲಿತ, ಬಡ ವರ್ಗದವರು ಸೂರಿಗಾಗಿ ಪಕ್ಷಾತೀತವಾಗಿ ಬಲಿಷ್ಠವಾದ ಹೋರಾಟ ಮಾಡಿದರೆ ಹೋರಾಟಗಾರರನ್ನು ನಕ್ಸಲರು ಹಾಗೂ ಭಯೋತ್ಪಾದಕರು ಎಂಬ ಹಣೆಪಟ್ಟಿ ಪಟ್ಟಿ ಹೋರಾಟವನ್ನು ಮುರಿಯುವ ಷಡ್ಯಂತ್ರವನ್ನು ಆಳುವ ಸರಕಾರಗಳು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಹೋರಾಟದಿಂದಲೇ ನಮ್ಮ ಹಕ್ಕುಗಳನ್ನು ಪಡೆಯಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರ‌ ಬೇಡಿಕೆಯನ್ನು ಸರಕಾರ ಕೂಡಲೇ ಈಡೇರಿಸಬೇಕಾಗಿದೆ. 
ಸರಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸಂತ್ರಸ್ತರು ಸಿದ್ದಾಪುರದಿಂದ ವಿಧಾನಸೌದ ಚಲೋ ಚಳುವಳಿ ರೂಪಿಸಲಾಗುವುದು ಎಂದು ಎಚ್ಚರಿಸಿದ ಅವರು, ಸಿದ್ದಾಪುರ ಹಾಗೂ ಬಾಳುಗೋಡು ನಿರಾಶ್ರಿತರಿಗೆ ಶಾಶ್ವತ ಸೂರನ್ನು ಕಲ್ಪಿಸಿಕೊಡಬೇಕಾಗಿದೆ. ಈ ಹೋರಾಟಕ್ಕೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಪಾಲೇಮಾಡು ಮೊಣ್ಣಪ್ಪ ಮಾತನಾಡಿ, ಆಳುವ ಸರಕಾರಗಳು ಉಳ್ಳವರ ಪರವಾಗಿ ಆಡಳಿತ ನಡೆಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿಗಳನ್ನು ಮಾರಾಟ ಮಾಡಲಾಗುತ್ತಿದೆ. ಬಡವರು ಸೂರಿಗಾಗಿ ತುಂಡು ಭೂಮಿ ಕೇಳಿದರೆ ಅವರ ಮೇಲೆ ದೌರ್ಜನ್ಯ ನಡೆಸಿ, ಹೋರಾಟಗಾರರ ಮೇಲೆ ಸುಳ್ಳು ಕೇಸುಗಳುಗಳನ್ನು ದಾಖಲಿಸುವ ಮೂಲಕ ಹೋರಾಟವನ್ನು ಮುರಿಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಆದರೆ ಬಡವರ ಪರವಾಗಿರುವ ಈ ಹೋರಾಟ ನಿರಂತರ ಹಾಗೂ ಜಯ ಸಿಗುವವರೆಗೂ ಮುಂದುವರೆಯಲಿದೆ ಎಂದರು.

ಈ ಸಂದರ್ಭ ಪಿ.ಎಫ್.ಐ ಮಡಿಕೇರಿ ನಗರ ಅಧ್ಯಕ್ಷ ಎಂ.ಎ ಮುಸ್ತಫ, ಎಸ್.ಡಿ.ಪಿ.ಐ ಮಡಿಕೇರಿ ನಗರ ಸಮಿತಿ ಸದಸ್ಯ ಉಮ್ಮರ್, ಜಿಲ್ಲಾ ಸಮಿತಿ ಸದಸ್ಯ ಶೌಕತ್ ಅಲಿ ಇದ್ದರು.
Previous Post
Next Post

0 Post a Comment: