ಪೊಲೀಸ್ ಗಸ್ತು ವ್ಯವಸ್ಥೆ ಸುಧಾರಣೆ; ‘ಸುಬಾಹು ಇ-ಬೀಟ್’ ಸೇವೆಗೆ ಚಾಲನೆ

            TOC ಮಡಿಕೇರಿ :-ಗಸ್ತು ಸಿಬ್ಬಂದಿಗಳು ತಮ್ಮ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದಾರೆಯೇ ಇಲ್ಲವೆ ಎಂಬ ಬಗ್ಗೆ ತಿಳಿಯಲು ‘ಸುಬಾಹು ಇ-ಬೀಟ್’ ತಂತ್ರಾಂಶ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ತಿಳಿಸಿದ್ದಾರೆ.
    ಬೆಂಗಳೂರು ಮೂಲದ ಸ್ಮಾರ್ಟ್ ಸೆಕ್ಯೂರ್ ಎಂಬ ಸಂಸ್ಥೆಯು ರೂಪಿಸಿರುವ ‘ಸುಬಾಹು ಇ-ಬೀಟ್’ ತಂತ್ರಾಂಶವನ್ನು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿರುವ ಕಾನ್ಫರೆನ್ಸ್ ಹಾಲ್‍ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
    ಜಿಲ್ಲಾ ಪೊಲೀಸ್ ವತಿಯಿಂದ ಇ-ಬೀಟ್ ಜಾರಿ ಕುರಿತು, ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಸುಬಾಹು-ಇ ಬೀಟ್ ತಂತ್ರಾಂಶ ಕಾರ್ಯಾರಂಭ ಮಾಡಿದೆ. ಈ ಹಿಂದೆ ರಾತ್ರಿ ಗಸ್ತನ್ನು ಕೈಬರಹದ ಮೂಲಕ ದಾಖಲಿಸಲಾಗುತ್ತಿತ್ತು. ಸಿಬ್ಬಂದಿಗಳು ನಿಗದಿತ ಸ್ಥಳಗಳಿಗೆ ತೆರಳಿ ಅಲ್ಲಿ ಸಹಿ ಮಾಡುವ ವ್ಯವಸ್ಥೆ ಇತ್ತು. ಇದೀಗ ಸುಬಾಹು ಇ-ಬೀಟ್ ಮುಖಾಂತರ ಸಿಬ್ಬಂದಿಗಳು ತಮ್ಮ ಸ್ಮಾರ್ಟ್ ಫೋನ್ ಬಳಸಿ ಕ್ಯು ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾಗಿದೆ. ನಿಗದಿತ ಸ್ಥಳಗಳಲ್ಲಿ ಅಂದರೆ ಗಸ್ತು ತೆರಳುವ ಮಾರ್ಗಗಳಲ್ಲಿ ಕ್ಯು ಆರ್ ಕೋಡ್ ಅನ್ನು ಸಿಬ್ಬಂದಿಗಳು ಸ್ಕ್ಯಾನ್ ಮಾಡಬೇಕಿದೆ. ಇದರಿಂದ ಸಿಬ್ಬಂದಿಗಳೂ ಸಹ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದರು. 
    ಇಂದಿನ ಕಾಲಘಟ್ಟದಲ್ಲಿ ಆಧುನಿಕ ತಂತ್ರಾಂಶ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಮತ್ತು ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಬಾಹು ತಂತ್ರಾಂಶ ಸಾಕಷ್ಟು ಸಹಕಾರಿಯಾಗಲಿದೆ. ಈ ಮೂಲಕ ಜಿಲ್ಲೆಯ ಜನತೆಗೆ ಉತ್ತಮ ಸೇವೆ ಕಲ್ಪಿಸಲೂ ಸಹ ಈ ತಂತ್ರಾಂಶ ನಮಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
    ಸಾರ್ವಜನಿಕರು ಸುಬಾಹು ರೆಸಿಡೆಂಟ್ ಆಪ್ ಅನ್ನು ಉಚಿತವಾಗಿ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ದೂರದ ಊರಿಗೆ ತೆರಳುವ ಮುನ್ನ ಹತ್ತಿರದ ಪೊಲೀಸ್ ಠಾಣೆಗೆ ಈ ತಂತ್ರಾಂಶದ ಮೂಲಕ ಮಾಹಿತಿ ನೀಡಬಹುದಾಗಿದೆ. ಇದರಿಂದ ದೂರ ಪ್ರಯಣ ಕೈಗೊಂಡ ಸಂಧರ್ಭದಲ್ಲಿ ಬೀಟ್ ಪೊಲೀಸರು ಮನೆಯ ಬಳಿಯೂ ಬಂದು ಗಸ್ತು ತಿರುಗಲಿದ್ದಾರೆ ಎಂದು ತಿಳಿಸಿದರು.
    ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬೀಟ್ ಕರ್ತವ್ಯ ನಿರ್ವಹಿಸುವ ಬಗ್ಗೆ ಹಿರಿಯ ಅಧಿಕಾರಿಗಳು ತಿಳಿಯಲು ಮತ್ತು ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮ ಪಡಿಸಲೂ ಸಹ ಸುಬಾಹು ತಂತ್ರಾಂಶ ಸಹಕಾರಿಯಾಗಲಿದೆ. ಜೊತೆಗೆ ಮನೆ ಕಳವು ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ ಎಂದರು. 
    ಸುಬಾಹು ತಂತ್ರಾಂಶ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿಯಲು ಮಡಿಕೇರಿ ನಗರ, ಸೋಮವಾರ ಪೇಟೆ, ವಿರಾಜಪೇಟೆ, ಶನಿವಾರಸಂತೆ ಮತ್ತು ಗೋಣಿಕೊಪ್ಪದಲ್ಲಿ ಪೈಲೆಟ್ ಪ್ರಾಜೆಕ್ಟ್‍ನ್ನು ಸಹ ನಡೆಸಲಾಗಿದ್ದು ತಂತ್ರಾಂಶವನ್ನು ಬಳಸಲು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಟ್ಟಾರೆ 16 ಠಾಣೆಗಳಲ್ಲಿಯೂ ಸಹ ಈ ತಂತ್ರಾಂಶ ಬಳಕೆಗೆ ಇದೀಗ ಚಾಲನೆ ನೀಡಲಾಗಿದೆ ಎಂದರು.
    ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಕೆಲವು ಕಡೆಗಳಲ್ಲಿ ಅಂತರ್ಜಾಲ ಸೇವೆ ದೊರೆಯುವುದಿಲ್ಲ ಆದರೆ ಈ ತಂತ್ರ್ರಾಂಶ ಅಂತಹ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿಗಳು ಭೇಟಿಕೊಟ್ಟಾಗ ಅಗತ್ಯ ಮಾಹಿತಿಗಳನ್ನು ತನ್ನಲ್ಲಿ ಸಂಗ್ರಹಿಸಿ ಇಂಟರ್‍ನೆಟ್ ಸೇವೆ ಸಿಗುವ ಪ್ರದೇಶದಿಂದ ಮತ್ತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ ಎಂದರು.
    ಬಳಿಕ ಮಾತನಾಡಿದ ಸ್ಮಾರ್ಟ್ ಸೆಕ್ಯೂರ್ ಸಂಸ್ಥೆಯ ಮಹೇಂದ್ರ ಅವರು, ಪೊಲೀಸ್ ಇಲಾಖೆಗೆ ಈ ತಂತ್ರಾಂಶದ ಬಳಕೆ ಅತ್ಯಂತ ಅವಶ್ಯಕವಾಗಿದೆ. ಸುಬಾಹು ಅಡ್ಮಿನ್ ಅನ್ನು ಹಿರಿಯ ಅಧಿಕಾರಿಗಳಿಗಾಗಿ ಮತ್ತು ಸುಬಾಹು ಬೀಟ್ ಅನ್ನು ಬೀಟ್ ಅಧಿಕಾರಿಗಳಿಗಾಗಿ ವಿನ್ಯಾಸಗೊಳಿಸಿದ್ದು ಮೊಬೈಲ್ ಮುಖಾಂತರವೇ ಅನೇಕ ಮಾಹಿತಿ ಪಡೆಯಲು ಪೂರಕವಾಗಿದೆ ಎಂದರು.
    ಇನ್ನು ಸುಬಾಹು ತಂತ್ರಾಂಶ ಹೇಗೆ ಬಳಸಬೇಕು. ಯಾವ ರೀತಿ ಮಾಹಿತಿ ಸಂಗ್ರಹಿಸಬೇಕು ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಂಕ್ಷಿಪ್ತ ತರಬೇತಿ ನೀಡಲಾಯಿತು.
   ಸಮಾರಂಭದಲ್ಲಿ ವಿರಾಜಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕರಾದ ಜಯಕುಮಾರ್ ಮತ್ತು ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.
    ಕಾರ್ಯಕ್ರಮದಲ್ಲಿ ಮಡಿಕೇರಿ ಉಪ ಪೊಲೀಸ್ ಅಧೀಕ್ಷಕರಾದ ದಿನೇಶ್ ಕುಮಾರ್ ಅವರು ಸ್ವಾಗತಿಸಿದರು. ಸೋಮವಾರ ಪೇಟೆ ಪೊಲೀಸ್ ಸೋಮೇಗೌಡ ಅವರು ವಂದಿಸಿದರು. ಪೊಲೀಸ್ ನಿರೀಕ್ಷಕರಾದ ಎಸ್.ಎನ್ ಜಯರಾಮ್  ಉಪಸ್ಥಿತರಿದ್ದರು.
Previous Post
Next Post

0 Post a Comment: