ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಇಡೀ ಜಿಲ್ಲೆ ಕಂಡು ಕೇಳರಿಯದಾ ಪ್ರವಾಹಕ್ಕೆ ತುತ್ತಾಗಿತ್ತು. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಮಹಾ ಮಳೆಯನ್ನು ನೆನಪಿಸುವಂತಹಾ ಮಳೆ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿದೆ. ಕೊಡಗಿನಲ್ಲಿ ಶುಕ್ರವಾರ ಬೆಳಿಗ್ಗಿನಿಂದಲೇ ನಿಲ್ಲದೇ ಮಳೆ ಸುರಿಯುತ್ತಿದೆ. ಜಿಲ್ಲೆಯು ಬಹುತೇಕ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಹಲವರು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಹಾ ಮಳೆಯಿಂದಾಗಿ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂ ಕುಸಿತಕ್ಕೆ ಐವರು ಬಲಿಯಾಗಿದ್ದಾರೆ. ಐವರ ಪೈಕಿ ನಾಲ್ವರ ಮೃತ ದೇಹವನ್ನು ರಕ್ಷಣಾ ಪಡೆಯು ಹೊರತೆಗೆದಿದ್ದು, ಇನ್ನೊಬ್ಬರ ಮೃತದೇಹ ಪತ್ತೆಯಾಗಬೇಕಿದೆ. ಅತ್ತೇಡಿ ಹಾಗೂ ಕಾಳನ ಕುಟುಂಬಕ್ಕೆ ಸೇರಿದ ವ್ಯಕ್ತಿಗಳು ಭೂಕುಸಿತಕ್ಕೆ ಸಿಲುಕಿ ಪ್ರಾಣ ತೆತ್ತವರೆಂದು ತಿಳಿದುಬಂದಿದೆ.
ಯಶವಂತ ಅತ್ತೇಡಿ, ಬಾಲಕೃಷ್ಣ , ಯುಮುನಾ ಹಾಗೂ ಉದಯ ಕಾಳನ ಎಂಬುವವರು ಮಣ್ಣು ಕುಸಿತಕ್ಕೆ ಸಿಲುಕಿ ಮೃತಪಟ್ಟವರೆಂದು ಗುರುತಿಸಲಾಗಿದೆ. ಭಾಗಮಂಡಲ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾಗಮಂಡ ತ್ರಿವೇಣಿ ಸಂಗಮ ಕಳೆದ ಮೂರು ದಿನ ಹಿಂದೆಯೇ ಭರ್ತಿಯಾಗಿದ್ದು ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ: ಕೊಡಗಿನಲ್ಲಿ ರೆಡ್ ಅಲರ್ಟ್ ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಿಗೆ ಶನಿವಾರ ಕೂಡ ರಜೆ ವಿಸ್ತರಣೆ ಮಾಡಿ ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಆದೇಶ
ಹೊರಡಿಸಿದ್ದಾರೆ. ಸಿದ್ದಾಪುರ ಸಮೀಪದ ಗುಹ್ಯ ಕಕ್ಕಟ್ಟುಕಾಡು ನದಿ ಪ್ರವಾಹಕ್ಕೆ ೬ ಮನೆಗಳು ನೆಲಸಮವಾಗಿದೆ. ಹತ್ತಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಪ್ರವಾಹಕ್ಕೆ ಸಿಲುಕಿದವರನ್ನು ಪರಿಹಾರ ಕೇಂದ್ರಕ್ಕೆ ರವಾನಿಸಲಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಐದು ಕಡೆ ಗಂಜಿ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ. ನೆಲ್ಲಿಹುದಿಕೇರಿ ಸೇತುವೆ ಮಟ್ಟಕ್ಕೆ ಕಾವೇರಿ ನೀರು ತಲುಪಿದ್ದು ಇದೇ ಮಳೆ ಮುಂದುವರೆದಲ್ಲಿ ಸೇತುವೆ ಮುಳುಗುವ ಸಾಧ್ಯತೆ ಇದೆ. ಮಹಾ ಮಳೆಗೆ ಕುಶಾಲನಗರದ ೧೫ ಮನೆಗಳಿಗೆ ನೀರು ಪ್ರವೇಶ: ಆತಂಕದಲ್ಲಿ ಸಾರ್ವಜನಿಕರು: ಕೊಡಗಿನಲ್ಲಿ ಹೆಚ್ಚುತ್ತಿರಿವ ಮಹಾಮಳೆಗೆ ಕುಶಾಲನಗರದ ಕೆಲವು ಬಡಾವಣೆಗಳಿಗೆ ನೀರು ಪ್ರವೇಶಸಿದ್ದು, ಸಾರ್ವಜನಿಕರಲ್ಲಿ ಮತ್ತೇ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ, ನಿಜಾಮುದ್ದೀನ್ ಬಡಾವಣೆಯ ಹದಿನೈದಕ್ಕೂ ಹೆಚ್ಚು ಮನೆಗಳಿಗೆ ನೀರು ಪ್ರವೇಶಿಸಿದೆ. ಬೆಳಿಗ್ಗೆಯಿಂದ ನಿಧಾನಗತಿಯಲ್ಲಿ ಏರಿಕೆಯಾದ ನೀರು, ತಾಸುಗಳು ಕಳೆದಂತೆ ವೇಗವಾಗಿ
ನೀರಿನಮಟ್ಟ ಏರಲು ಪ್ರಾರಂಭವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಮನೆಯಲ್ಲಿರುವ ಸರಕು, ಸಾಮಗ್ರಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ಪ್ರವೇಶಿಸಿರುವ ಮನೆಗಳಿಂದ ಸರಕು, ಸಾಮಾಗ್ರಿಗಳನ್ನು ಸಾಗಿಸಲು ಜಿಲ್ಲಾಡಳಿತದ ವತಿಯಿಂದ ನಾಲ್ಕು ದೋಣಿಗಳನ್ನು ಹೆಚ್ಚಿನ ಸೇವಕರನ್ನು ನೇಮಿಸಲಾಗಿದೆ. ಕುವೆಂಪು ಬಡಾವಣೆ ಹಾಗೂ ತಮ್ಮಯ್ಯಶೆಟ್ಡಿ ಬಡಾವಣೆಯ ಐದು ಮನೆಗಳು, ಸಾಯಿ ಬಡಾವಣೆಯ ಹತ್ತು ಮನೆಗಳು, ಇಂದಿರಾ ಬಡಾವಣೆಯ ಮೂರು ಮನೆಗಳು, ನಿಜಾಮುದ್ದೀನ್ ಬಡಾವಣೆಯ ಎರಡು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಿದ್ದು, ತಾತ್ಕಾಲಿಕವಾಗಿ ಅವಶ್ಯಕ ಸೌಲಭ್ಯಗಳನ್ನು ಒದಗಿಸಿಸಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೀರು ಪ್ರವೇಶಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ
ನಡೆಸಲಾಗಿದೆ. ಅಲ್ಲದೇ ಸಂತ್ರಸ್ತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗಿದ್ದು, ವಾಲ್ಮೀಕಿ ಭವನದಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು. ಬಳ್ಳದ ಬಾವಿಯಿಂದ ನೀರು ಪ್ರವೇಶ: ವೀಕ್ಷಣೆಗಾಗಿ ಮುಗ್ಗಿಬಿದ್ದ ಸಾರ್ವಜನಿಕರು ಕೊಪ್ಪ ಸೇತುವೆಯ ಬಳ್ಳದ ಬಾವಿಯಿಂದ ನೀರು ಹರಿಯಲಾರಂಭಿಸಿದ್ದು, ನೀರಿನ ಹರಿವನ್ನು ವೀಕ್ಷಿಸಲು ಸಾರ್ವಜನಿಕರು ಮುಗಿಬಿದ್ದ ಘಟನೆ ನಡೆಯಿತು. ಸಾರ್ವಜನಿಕರ ಸುರಕ್ಷತಾ ದೃಷ್ಠಿಯಿಂದ ಸೇತುವೆ ಬಳಿ ಬ್ಯಾರಿಕೇಟ್ ಗಳನ್ನು ಅಳವಡಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ: ಭೂಕುಸಿತಕ್ಕೆ ಸಿಲುಕಿ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ೫ ಲಕ್ಷ ರೂ ಪರಿಹಾರವನ್ನು ಕೇಂದ್ರ ಸಚಿವ ಸದಾನಂದಗೌಡ ಘೋಷಿಸಿದ್ದಾರೆ. ಕೊಡಗು ಜಿಲ್ಲೆಗೆ ಅವರ ನೇತೃತ್ವದಲ್ಲಿ ಬಿಜೆಪಿ ಪ್ರವಾಹ ಅಧ್ಯಯನ ತಂಡ ಭೇಟಿ ನೀಡಿತು. ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಅಧ್ಯಯನ ತಂಡದಲ್ಲಿ ಈಶ್ವರಪ್ಪ, ಸಿ.ಟಿ ರವಿ ,ಇದ್ದರು.













0 Post a Comment: