10 ಸಾವಿರ ರೂ. ಪರಿಹಾರದ ಚೆಕ್ ವಿತರಣೆ : ಶಾಸಕ ಬೋಪಯ್ಯರಿಂದ ಶಾಶ್ವತ ಪರಿಹಾರದ ಭರವಸೆ 


ಮಡಿಕೇರಿ ಆ.22 : ಸಿದ್ದಾಪುರದ ಕರಡಿಗೋಡು ಮತ್ತು ಗೂಡುಗದ್ದೆ ನಿವಾಸಿಗಳ ಮನೆಗಳು ಪ್ರತೀವರ್ಷ ಕಾವೇರಿ ಪ್ರವಾಹದಿಂದ ಜಲಾವೃತಗೊಳ್ಳುತ್ತಿದ್ದು, ಮುಂದಿನ ವರ್ಷದಿಂದ ಈ ಸಮಸ್ಯೆ ಉಂಟಾಗದಂತೆ ಶಾಶ್ವತ ಪರಿಹಾರವನ್ನು ಸರಕಾರ ಮಾಡಲಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದರು. ಕರಡಿಗೋಡು ಹಾಗೂ ಮಡಿಕೇರಿ ರಸ್ತೆಯ ಪ್ರವಾಹ ಪೀಡಿತ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳ ತಾತ್ಕಾಲಿಕ ಪರಿಹಾರದ ಚೆಕ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಈಗಾಗಲೇ ವೀರಾಜಪೇಟೆ ತಾಲೂಕಿನಲ್ಲಿ ಸುಮಾರು 2 ಕೋಟಿ ರೂ.ಗಳಷ್ಟು ಪರಿಹಾರವನ್ನು ವಿತರಿಸಲಾಗಿದೆ. ಪ್ರತೀವರ್ಷ ಪ್ರವಾಹಕ್ಕೆ ತುತ್ತಾಗುವ ಕರಡಿಗೋಡು ಮತ್ತು ಗೂಡುಗದ್ದೆಯ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಮೀಪದಲ್ಲೇ ಜಾಗ ಗುರುತಿಸಿ ಇಡೀ ಗ್ರಾಮವನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಸರಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿಯವರು ಜಾಗ ನೀಡಲು ಮುಂದೆ ಬಂದಲ್ಲಿ ಸರಕಾರಿ ದರದಲ್ಲಿ ಜಾಗವನ್ನು ಖರೀದಿಸಿ ಮನೆ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕ ಮಲ್ಲಂಡ ಮಧು , ಗ್ರಾಮ ಪಂಚಾಯಿತಿ ಸದಸ್ಯ ಸುಕ್ರು , ಗ್ರಾಮೀಣ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಗ್ರಾಮ ಲೆಕ್ಕಿಗ ಓಮಪ್ಪ, ಬಿಜೆಪಿಯ ಪಂದಿಕಂಡ ಅಶೋಕ್, ಪ್ರಜಿತ್, ಪ್ರವೀಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು
Previous Post
Next Post

0 Post a Comment: