ಮಾಧ್ಯಮ ಭಯೋತ್ಪಾದನೆಗೆ ಇನ್ನದೆಷ್ಟು ಮಂದಿ ಬಲಿಪಶುಗಳಾಗಬೇಕಿದೆ..?


✍ ಸ್ನೇಹಜೀವಿ ಅಡ್ಕ

ಅಕ್ರಮ ಹವಾಲ ಹಣದ ಹೆಸರಿನಲ್ಲಿ ಬಂಧಿತಳಾದ ಮಂಗಳೂರಿನ ಆಯೆಷಾ ಳಿಗೆ ಭಯೋತ್ಪಾದನೆಯ ನಂಟನ್ನು ಕಲ್ಪಿಸಿ ಕರಾವಳಿಯನ್ನು ಭಯೋತ್ಪಾದನಾ ತಾಣಗಳೆಂಬಂತೆ ವಾರಗಟ್ಟಲೆ ಬಿಂಬಿಸಿದ ಇಲ್ಲಿನ ಕೆಲವು ಮಾಧ್ಯಮಗಳು, ಉಪ್ಪಳ ಸಮೀಪದ ಖಾದರ್ ಅನ್ನುವ ಯುವಕ ವಿದೇಶಕ್ಕೆ ಹೋಗುವಾಗ ಬ್ಯಾಗಿನಲ್ಲಿದ್ದ ರಿಪೇರಿಗೆ ಕೊಂಡೊಯ್ಯುತ್ತಿದ್ದ ಇಲೆಕ್ಟ್ರಾನಿಕ್ ವಸ್ತುವನ್ನೇ ಬಾಂಬ್ ಎಂದು ಬಿಂಬಿಸಿ ಪೋಲೀಸ್ ತನಿಖೆಯಾಗುವ ಮುನ್ನವೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕನ ಬಂಧನ ಎಂದು ಬಿಂಬಿಸಿ ಆತನ ಬದುಕುನ್ನೇ ದುಸ್ತರಗೊಳಿಸಿದ ಇಲ್ಲಿನ ಮಾಧ್ಯಮಗಳ ಒಂದು ಸಮುದಾಯದ ವಿರುದ್ಧದ ದ್ವೇಷದ ಬೇಟೆಗಳಿಗೆ ಅಂತ್ಯವಾಗಲೇ ಇಲ್ಲ. ನಿರಂತರವಾಗಿ ಇಲ್ಲಿನ ಒಂದು ಸಮುದಾಯದ ವಿರುದ್ಧ ಕಪೋಲ ಕಲ್ಪಿತವಾದ ವರದಿಗಳನ್ನು ಬಿತ್ತರಿಸಿ ಸಮಾಜದ ಮುಂದೆ ಅವರನ್ನು ತಪ್ಪಿತಸ್ಥರನ್ನಾಗಿ ಮಾಡುವ ಷಡ್ಯಂತ್ರಗಳು ಮತ್ತೂ ಮುಂದುವರಿಯುತ್ತಿದೆ. ಬೆಳ್ತಂಗಡಿ ಸಮೀಪದ ಧಾರ್ಮಿಕ ಗುರುವೊಬ್ಬರನ್ನು ವಿನಾಃ ಕಾರಣ ಭಯೋತ್ಪಾದಕನೆಂಬಂತೆ ಚಿತ್ರೀಕರಿಸಿ ಅವರ ಮಾನ ಹರಾಜು ಗೈದಂತಹ ಪ್ರಸಂಗ ಇಂದು ನಡೆದಿದೆ.
ಇದು ವ್ಯವಸ್ಥಿತವಾಗಿ ಒಂದು ಸಮುದಾಯವನ್ನು ದಮನಿಸಲು ಮಾಧ್ಯಮಗಳು ಮೊದಲಿನಿಂದಲೂ ಕಂಡುಕೊಂಡು ಬಂದಂತಹ ಷಡ್ಯಂತ್ರಗಳ ಮುಂದುವರಿದ ಭಾಗವಾಗಿದೆ.
ಗೌರಿ ಲಂಕೇಶ್ ಹತ್ಯೆಯಲ್ಲೂ, ಸಾಹಿತಿ ಕಲ್ಬುರ್ಗಿ ಹತ್ಯೆಯಲ್ಲೂ ಕರಾವಳಿಯ ಕೆಲವರ ಕೈವಾಡ ದೃಢಪಟ್ಟಾಗ ಅದನ್ನು ಬಿತ್ತರಿಸಲು ಪೈಪೋಟಿ ತೋರಿಸದ ಮಾಧ್ಯಮಗಳು ಇಲ್ಲಿನ ನಿರಪರಾಧಿಗಳಾದ ಮುಸ್ಲಿಮರನ್ನು ಅಪರಾಧಿಗಳನ್ನಾಗಿ ಬಿಂಬಿಸಲು ಪೈಪೋಟಿ ನಡೆಸುತ್ತಿರುವುದು ಖಂಡನೀಯ.
ರಾಜ್ಯವು ಭೀಕರ ಪ್ರವಾಹಕ್ಕೆ ತುತ್ತಾಗಿ ಜನರು ನಿರಾಶ್ರಿತರಾಗಿ ಬದುಕುವ ಹಾದಿಯನ್ನು ನೋಡುತ್ತಿರುವಾಗ ಕೇಂದ್ರ ಸರ್ಕಾರವು ತನಗೇನೂ ಸಂಬಂಧವಿಲ್ಲದಂತೆ ಮೌನವಾಗಿ ಪರಿಹಾರ ನಿಧಿಯನ್ನು ನೀಡದೆ ಸತಾಯಿಸುವಾಗ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ ತಿಂಗಳಾಗುತ್ತಾ ಬಂದರೂ ಇನ್ನೂ ಸಚಿವ ಸಂಪುಟ ರಚಿಸದೆ ಸರ್ಕಾರವೇ ಜೀವನ್ಮರಣ ಸ್ಥಿತಿಯಲ್ಲಿದೆ. ಅಂತರಾಷ್ಟ್ರೀಯ ಮಾಧ್ಯಮಗಳು ಪ್ರಧಾನ ಮಂತ್ರಿಯವರ ಕುರಿತು ಟೀಕೆ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಕಾಣದ ರೂಪದಲ್ಲಿ ಪಾತಾಳಕ್ಕಿಳಿದು, ಉದ್ಯಮಿಗಳು ಆತ್ಮಹತ್ಯೆಯತ್ತ ಮುಖ ಮಾಡಿ ನಿಂತರೆ, ಬಡ ಹಾಗೂ ಮಧ್ಯಮ ವರ್ಗದ ಜನರು ಊಟಕ್ಕಿಲ್ಲದೆ ಪರದಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಜನತೆ ಸರ್ಕಾರದ ವಿರುದ್ಧ ತಿರುಗಿ ಬೀಳಬಾರದು ಅನ್ನುವ ಕಾರಣಕ್ಕಾಗಿ ಇಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಒಂದು ಸಮುದಾಯವನ್ನು ಅಪರಾಧಿಗಳನ್ನಾಗಿ ಬಿಂಬಿಸಲು ಹೊರಟಂತಿದೆ.
ಭಾಷೆಯ ಹೆಸರಿನಲ್ಲಿ ನಡೆಯುವ ಸಮಸ್ಯೆಗಳನ್ನು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ ರೂಪದಲ್ಲಿ ಪರಿವರ್ತಿಸುವಾಗ, ಜಿಲ್ಲೆಯಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಪೋಲೀಸ್ ವರಿಷ್ಠಾಧಿಕಾರಿ ಹೇಳಿಕೆ ನೀಡಿದ ಬಳಿಕವೂ ಮಾಧ್ಯಮಗಳು ಒಂದು ಸಮುದಾಯದ ವಿರುದ್ಧ ಇರುವಂತಹ ಪೂರ್ವಾಗ್ರಹ ಪೀಡಿತ ಸಂಶಯದ ಹೆಸರಿನಲ್ಲಿ ಒಬ್ಬರ ತೇಜೋವಧೆ ಮಾಡಿದ ಕುರಿತು ಸಮಗ್ರವಾದ ತನಿಖೆ ನಡೆಸಿ, ಸಂತ್ರಸ್ತ ವ್ಯಕ್ತಿಗೆ ನ್ಯಾಯ ಒದಗಿಸಿಕೊಡಬೇಕಾದ ಜವಾಬ್ದಾರಿ ಕಾನೂನು ಇಲಾಖೆಯ ಮೇಲಿದೆ.
ನಿರಂತರವಾಗಿ ಒಂದು ಸಮುದಾಯದ ವಿರುದ್ಧ ನಡೆಯುವ ಷಡ್ಯಂತ್ರಗಳನ್ನು ಕೊನೆಗೊಳಿಸಿ, ಮಾಧ್ಯಮಗಳು ಸಮಾಜದ ಬೆಳಕುಗಳಾಗಿ ಪರಿವರ್ತನೆ ಹೊಂದಬೇಕಾಗಿದೆ.
ಮುಸ್ಲಿಂ ಸಮುದಾಯದ ಮೌನ, ದೌರ್ಬಲ್ಯವಲ್ಲವೆಂಬುದನ್ನು ಇನ್ನಾದರೂ ಮನಗಾಣುವುದೊಳಿತು.
Previous Post
Next Post

0 Post a Comment: