ಕಾವೇರಿ ತವರಿಗಿಲ್ಲ‌ ಮಂತ್ರಿ ಸ್ಥಾನದ ಭಾಗ್ಯ : ಜಾತಿ ಲೆಕ್ಕಾಚಾರದಲ್ಲೂ ಕೊಡಗಿಗೆ ಒಲಿಯದ ಮಂತ್ರಿ ಭಾಗ್ಯ.


ಸಂಪಾದಕೀಯ / ಟೈಮ್ಸ್ ಆಫ್ ಕೂರ್ಗ್ 
 ಮಡಿಕೇರಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿ ೨೫ಕ್ಕೂ ಹೆಚ್ಚು ದಿನಗಳು ಕಳೆದ ೧೭ ಶಾಸಕರು ಮಂತ್ರಿಯಾಗಿ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದರು. ಸಚಿವ ಸ್ಥಾನಕ್ಕೆ ಬಿಜೆಪಿಯಲ್ಲಿ್ ಹಲವು ಶಾಸಕರು ಆಕಾಂಕ್ಷಿಗಳಿದ್ದರು. ಮಂತ್ರಿಯಾಗಿ ಪ್ರಮಾಣವಚನ ‌ಸ್ವೀಕರಿಸಿದ ೧೭ ಜನರ ಪೈಕಿ ೭ ಜನರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕೊಡಗು ಜಿಲ್ಲೆ ಬಿಜೆಪಿ ಭದ್ರಕೋಟೆ. ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರೇ ಚುನಾಯಿತರಾಗಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ೧೯೯೪,೧೯೯೯,೨೦೦೮,೨೦೧೩,ಹಾಗೂ ೨೦೧೮ ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಐದು ಬಾರಿ ಶಾಸಕರಾಗಿರುವ ಕೊಡವ ಸಮುದಾಯದ ರಾಜ್ಯದ ಏಕೈಕ ಶಾಸಕರಾಗಿದ್ದಾರೆ ಅಪ್ಪಚ್ಚು ರಂಜನ್. ೨೦೧೨ರಲ್ಲಿ ಜಗದೀಶ್ ಶೆಟ್ಟರ್ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ೧೧ ತಿಂಗಳು ಕಾರ್ಯನಿರ್ವಹಿಸಿದರು. ಜಾತಿ ಲೆಕ್ಕಾಚಾರದಲ್ಲಿ ಕೊಡವ ಜನಾಂಗದ ಶಾಸಕರಾದ ಅಪ್ಪಚ್ಚು ರಂಜನ್ ಅವರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ೫ ಬಾರಿ ಶಾಸಕರಾದ ರಂಜನ್ ಅವರಿಗೆ ಮಂತ್ರಿ ಸ್ಥಾನ‌ ಕೈತಪ್ಪಿದೆ. *ಸ್ಪೀಕರ್ ಸ್ಥಾನ‌ ಬೇಡ ಎಂದ ಬೋಪಯ್ಯ ಅವರಿಗೆ ಮಂತ್ರಿ ಸ್ಥಾನವೂ ಇಲ್ಲ.* ೨೦೦೪ರಲ್ಲಿ ಮಡಿಕೇರಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ್ ಆಯ್ಕೆಯಾದ ಬಿಜೆಪಿ ಹಿರಿಯ ಶಾಸಕ ಕೆ.ಜಿ ಬೋಪಯ್ಯ ನಂತರ ವಿರಾಜಪೇಟೆ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಗೆದ್ದಿದ್ದರು. ೨೦೦೮ರ ಯಡಿಯೂರಪ್ಪ ಸರ್ಕಾರದಲ್ಲಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಕೆ.ಜಿ ಬೋಪಯ್ಯ ಅವರಿಗೆ ಮತ್ತೊಮ್ಮೆ ಸ್ಪೀಕರ್ ಪಟ್ಟ ಕಟ್ಟಲು ನಿರ್ಧರಿಸಿತು. ಸ್ವತಹ ಬೋಪಯ್ಯ ಅವರೆ ನನಗೆ ಸ್ಪೀಕರ್ ಹುದ್ದೆ ಬೇಡ ಎಂದಿದ್ದರು. ಕೊನೆ ಕ್ಷಣದಲ್ಲಿ ಕಾಗೇರಿ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದರು. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬೋಪಯ್ಯ ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಎಂಬ ವಿಷಯ ಖಚಿತವಾಗಿತ್ತು , ಕೊನೆಯ ಕ್ಷಣದಲ್ಲಿ ಮಂತ್ರಿ ಸ್ಥಾನ ಬೋಪಯ್ಯ ಅವರ ಕೈತಪ್ಪಿದೆ. *ಭದ್ರಕೋಟೆಯ ಕಡೆಗಣನೆ* ಕೊಡಗು ಜಿಲ್ಲೆ ಭಾರತೀಯ ಜನತಾ ಪಕ್ಷದ ಭದ್ರಕೋಟೆ. ಕಳೆದ ಎರಡು ದಶಕಗಳಿಂದ ಗ್ರಾಮ ಪಂಚಾಯತಿ, ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅದಲ್ಲದೇ ಕಳೆದ ೨೦ ವರ್ಷಗಳಿಂದ ಜಿಲ್ಲೆಯಿಂದ ಅಪ್ಪಚ್ಚು ರಂಜನ್, ಹಾಗೂ ಬೋಪಯ್ಯ ಅವರು ಶಾಸಕರಾಗಿ ಆಯ್ಕೆಯಾಗುತ್ತಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಕೊಡಗಿನ ಇಬ್ಬರು ಶಾಸಕರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ಕೊಡಬಹುದು ಎನ್ನಲಾಗಿತ್ತು. ಇಬ್ಬರು ಶಾಸಕರಲ್ಲಿ ಒಬ್ಬರಿಗೂ ಕೂಡ ಮಂತ್ರಿ ಸ್ಥಾನ ನೀಡದಕ್ಕೆ ಕೊಡಗು ಬಿಜೆಪಿ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸೋತವರನ್ನು ತಂದು ಮಂತ್ರಿ ಮಾಡಿದ್ದಾರೆ. ಪಕ್ಷವನ್ನು ಕಟ್ಟಿ , ಬೆಳೆಸಿದವರನ್ನು ಪಕ್ಷದಿಂದ ಕಡೆಗಣಿಸುವ ಕೆಲಸ ಆಗುತ್ತಿದೆ. ಬಿಜೆಪಿ ‌ಹುಟ್ಟುವಾಗಲೇ ನಾನು ಬಿಜೆಪಿಯಲ್ಲಿದ್ದೇನೆ. ಪಕ್ಷಕ್ಕೆ ನಿಷ್ಠೆಯಿಂದ ಇದ್ದವಾ, ವ್ಯಕ್ತಿ ನಿಷ್ಠೆ ಮಾಡುವವರಲ್ಲ ನಾವು. ನಾನು ೫ ಬಾರಿ ಶಾಸಕನಾಗಿ ೨೨ ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ಕಳೆದ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ನನಗೆ ಅನ್ಯಾಯವಾಗಿತ್ತು, ನಂತರ ಜಗದೀಶ್ ಶೆಟ್ಟರ್ ಸರ್ಕಾರದಲ್ಲಿ ೧೧ ತಿಂಗಳು ಮಂತ್ರಿಯಾಗಿ‌ ಕೆಲಸ ಮಾಡಿದ್ದೆ. ಬಿಜೆಪಿ ಭದ್ರವಾಗಿರೋ ಕಡೆ ಕಡೆಗಣಿಸುವ ಕೆಲಸ ನಡೆಯುತ್ತಿದೆ.ಮೂಲ ಬಿಜೆಪಿಗರನ್ನು ಕಡೆಗಣಿಸುತ್ತಿರುವುದು ತುಂಬಾ ಬೇಸರ ತಂದಿದೆ. ಹೊಸಬರಿಗೆ ಮಣಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸೋತವರನ್ನು ತಂದು ಇಂದು ಮಂತ್ರಿ ಮಾಡಿದ್ದಾರೆ‌ ಎಂದು ಮುಖ್ಯಮಂತ್ರಿಗಳ ವಿರುದ್ಧ ಅಪ್ಪಚ್ಚು ರಂಜನ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಮೂಲಗಳ ಪ್ರಕಾರ ಕೊಡಗು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬೆಂಗಳೂರು ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಅವರಿಗೆ ಕೊಡಗು ‌ಜಿಲ್ಲಾ ಉಸ್ತುವಾರಿ ಮಂತ್ರಿ ಹೊಣೆ ಸಿಗಲಿದೆ‌ ಎನ್ನಲಾಗುತ್ತಿದೆ. ಮೈತ್ರಿ ‌ಸರ್ಕಾರದ ಅವಧಿಯಲ್ಲಿ ಕೆ.ಆರ್ ನಗರದ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು . ಇದೀಗ ಮತ್ತೊಮ್ಮೆ ಹೊರ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ‌ಮಂತ್ರಿ ಸ್ಥಾನ ದೊರಕಲಿದೆ.
Previous Post
Next Post

0 Post a Comment: