ವರದಿ : ತೌಸಿಫ್ ಅಹ್ಮದ್ ಅಮ್ಮತ್ತಿ
ಅಮ್ಮತ್ತಿ (TOC ಕೊಡಗು ): ಚರಿತ್ರೆಯನ್ನು ಕಲಿಯುವುದು ಮಾತ್ರವಲ್ಲ ಮತ್ತೊಬ್ಬರು ಕಲಿಯುವ ಚರಿತ್ರೆಯನ್ನು ಬರೆಯುವಂತವರಾಗಿ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅಮ್ಮತ್ತಿ ಗುಡ್‌ಶೆಫರ್ಡ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಅಮ್ಮತ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅಮ್ಮತ್ತಿ ಗುಡ್‌ಶೆಫರ್ಡ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಮರಿಯಾ ತೆರೆಸಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲಜ ಬೆಳಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶೋಭ ಅವರು ಉದ್ಘಾಟಿಸಿದರು. ನಂತರ ಮಾತನಾಡಿ ಅವರು ವಿದ್ಯಾರ್ಥಿ ಜೀವನ ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತವಾಗದೆ , ಕಲೆ ಸಾಹಿತ್ಯ ಕ್ರೀಡಾ ರಂಗದಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದರು.
ವಿರಾಜಪೇಟೆ ಕ್ಲಸ್ಟರ್ ಸಮನ್ವಯ ವ್ಯಕ್ತಿ ಜೆ.ಸಿ.ಜೋಸೆಫ್ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿನ ಕಲಾಸಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪ್ರತಿಭಾ ಕರಂಜಿಯಂತಹ ಸ್ಪರ್ಧೆಗಳು ನಡೆಯುತ್ತಿದ್ದು ಇದು ನಿಜಕ್ಕೂ ಶ್ಲಾಘನೀಯ ಎಂದರು.
ದೇಶ ಭಕ್ತಿ ಗೀತೆ , ರಂಗೋಲಿ ಬಿಡಿಸುವುದು , ಧಾರ್ಮಿಕ ಪಟ್ಟಣ , ಭಾವ ಗೀತೆ , ಚಿತ್ರ ರಚನೆ , ಕವಾಲಿ , ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು.
ನಂತರ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗು ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ಸಮನ್ವಯ ವ್ಯಕ್ತಿ ಸುಷ , ವಿವಿಧ ಶಾಲೆಗಳ ಶಿಕ್ಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




0 Post a Comment: