ಕೊಂಡಂಗೇರಿಯಲ್ಲಿ ಪ್ರವಾಹ, ನೂರಾರು ಮನೆಗಳು ಸಂಪೂರ್ಣ ಜಲಾವೃತ. 20 ಕ್ಕೂ ಹೆಚ್ಚು ಮನೆಗಳ ಕುಸಿತ. 


ಚಿತ್ರ ವರದಿ : ಮುಸ್ತಫಾ ಸಿದ್ಧಾಪುರ 
ಸಿದ್ದಾಪುರ, ಆ.10: ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿಯಲ್ಲಿ ಪ್ರವಾಹಕ್ಕೆ 100 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, 20 ಕ್ಕೂ ಹೆಚ್ಚು ಮನೆಗಳ ಕುಸಿತವಾಗಿದೆ. ಕೊಪ್ಪ, ಅಮ್ಮತ್ತಿ ರಸ್ತೆ, ಕೊಂಡಂಗೇರಿ ಜಂಕ್ಷನ್ ಸೇರಿದಂತೆ ವಿವಿಧೆಡೆಯಲ್ಲಿನ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಕೊಂಡಂಗೇರಿ - ಸಿದ್ದಾಪುರ ಹಾಗೂ ಮೂರ್ನಾಡು ರಸ್ತೆಯಲ್ಲಿ ನೀರು ತುಂಬಿ ಸಂಪೂರ್ಣ ಬಂದ್ ಆಗಿದೆ. ವೃದ್ಧರು ಮಕ್ಕಳು ಸೇರಿದಂತೆ 500 ಕ್ಕೂ ಹೆಚ್ಚು ಮಂದಿ ಸರಕಾರಿ ಶಾಲೆಯ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ನಿರಾಶ್ರಿತ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ನಿರಾಶ್ರಿತ ಅಬ್ದುಲ್‌ ರೆಹಮಾನ್ ಮಾತನಾಡಿ, ದಿಢೀರನೆ ಪ್ರವಾಹ ಎದುರಾಗಿರುವುದರಿಂದ ಎಲ್ಲರೂ ಜೀವ ರಕ್ಷಣೆಗಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಕೂಲಿ ಕಾರ್ಮಿರು ಹೆಚ್ಚಾಗಿರುವುದರಿಂದ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ನಿರ್ಮಿಸಿದ ಮನೆಗಳು ಕುಸಿದು ಹಲವು ಕುಟುಂಬಗಳು ಮುಂದೇನು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಹಲವು ಮನೆಗಳು ಸಂಪೂರ್ಣ ಜಲಾವೃತವಾಗಿರುವುದರಿಂದ ಅಗತ್ಯ ದಾಖಲೆಗಳೆಲ್ಲಾ ಮನೆಯೊಳಗೆ ನೀರಿನಲ್ಲಿ ಮುಳುಗಿದೆ. ಪ್ರವಾಹದ ನೀರು ಇಳಿದ ಬಳಿಕ ಸರಕಾರ ಹಾಗೂ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.


Previous Post
Next Post

0 Post a Comment: