ಮಡಿಕೇರಿ:ಪೆರುಂಬಾಡಿ-ಮಾಕುಟ್ಟ ಅಂತರರಾಜ್ಯ ಹೆದ್ದಾರಿ ಪರಿಶೀಲಿಸಿದ ಶಾಸಕರು ಪೆರುಂಬಾಡಿ-ಮಾಕುಟ್ಟ ಅಂತರರಾಜ್ಯ ಹೆದ್ದಾರಿ ವಾಟೆಕೊಲ್ಲಿ ಬಳಿ ರಸ್ತೆಯನ್ನು ಶಾಸಕರಾದ ಕೆ.ಜಿ.ಬೋಪಯ್ಯ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಕಳೆದ ಬಾರಿಯಂತೆ ಈ ಬಾರಿಯೂ ಮಾಕುಟ್ಟ ಅಂತರರಾಜ್ಯ ಹೆದ್ದಾರಿ ಕುಸಿದಿದ್ದು, ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ಅಂತರರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಶಾಶ್ವತವಾಗಿ ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ರಸ್ತೆ ನಿರ್ಮಾಣಕ್ಕೆ ಸಹಕರಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. ಜೊತೆಗೆ ಗಡಿಭಾಗದ ಕೂಟುಹೊಳೆಯಲ್ಲಿ ಸೇತುವೆ ನಿರ್ಮಿಸಬೇಕಿದೆ. ಮಟ್ಟನೂರು ಮತ್ತು ಕಣ್ಣೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ
ನಿಲ್ದಾಣವಿದ್ದು, ಈ ಭಾಗದ ಜನರಿಗೆ ಅತ್ಯಂತ ಉಪಯುಕ್ತವಾದ ಅಂತರರಾಜ್ಯ ಹೆದ್ದಾರಿಯಾಗಿದ್ದು, ಆದ್ದರಿಂದ ಶಾಶ್ವತ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. 2019ರೊಳಗೆ ಕೂಟುಹೊಳೆ ಸೇತುವೆಯನ್ನು ಪೂರ್ಣಗೊಳಿಸಲಾಗುವುದು. ಎರಡು ಮೂರು ದಿನಗಳಲ್ಲಿ ಲಘು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಲಾಗುವುದು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು. ಕೇರಳ ಗಡಿ ಭಾಗದ ಶಾಸಕರಾದ ಸನ್ನಿ ಜೋಸೆಫ್ ಅವರು ಮಾತನಾಡಿದರು. ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ತಹಶೀಲ್ದಾರ್ ಪುರಂದರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಲೋಕೋಪಯೋಗಿ ಇಲಾಖೆಯ ಎಇಇ ಸುರೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ ಇತರರು ಇದ್ದರು.


0 Post a Comment: