ಸೋಲು ಮತ್ತು ಗೆಲುವು ಸಮಾನವಾಗಿ ಸ್ವೀಕರಿಸಿ: ಸುಮನ್ ಡಿ.ಪೆನ್ನೇಕರ್ ಸಲಹೆ


ಮಡಿಕೇರಿ :ಬದುಕಿನಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದರ ಜೊತೆಗೆ ಆತ್ಮ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಸಲಹೆ ಮಾಡಿದ್ದಾರೆ. ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ 2019 ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವು ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದರ ಜೊತೆಗೆ ಸಮಸ್ಯೆಗಳು ಬಂದಾಗ ಧೃತಿಗೆಡದೆ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜೀವನದಲ್ಲಿ ಏಳು ಬೀಳು ಇರುತ್ತವೆ. ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ವಿದ್ಯಾರ್ಥಿಗಳು ಸಮಾಜದಲ್ಲಿ ಹಿರಿಯರು, ಸಹೋದ್ಯೋಗಿಗಳು, ಇತರರ ಬಗ್ಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಉದ್ಯೋಗ ಪಡೆಯಲು ಪ್ರಯತ್ನಿಸಬೇಕು. ಯಾವ ಹುದ್ದೆಯು ಸಹ ಕಡಿಮೆಯಿಲ್ಲ ಎಂಬುದನ್ನು ಭಾವಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನುಡಿದರು. ಈಗಿನ ಜಗತ್ತಿನಲ್ಲಿ ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ. ಬೌದ್ಧಿಕ ಗುಣಮಟ್ಟ 

ಹೆಚ್ಚಾಗುವುದರೊಂದಿಗೆ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಅವರು ತಿಳಿಸಿದರು. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪೋಷಕರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಹಾಗೂ ವಿದ್ಯಾರ್ಥಿಗಳು ಶಿಸ್ತು, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರು ಕಿವಿಮಾತು ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆಂಚಪ್ಪ ಅವರು ಮಾತನಾಡಿ ಇಂದಿನ ಆಧುನಿಕ ಬದುಕಿನಲ್ಲಿ ಉದ್ಯೋಗಾವಕಾಶಗಳು ಸಾಕಷ್ಟು ಇದ್ದು, ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಆದ್ದರಿಂದ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಧನಂಜಯ ಅವರು ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕು. ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು. ಶಿಕ್ಷಣವೇ ಶಕ್ತಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ. ಉತ್ತಮ ಚಿಂತನೆಯತ್ತ ನಡೆಯಲು ಗುರುಗಳ ಮಾರ್ಗದರ್ಶನ ಪಾಲಿಸಬೇಕು. ಉನ್ನತ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಬೇಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಕೆ.ಎಂ.ಭವಾನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 2019 ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲು ವಿದ್ಯಾನೀಕೇತನ ಪಿಯು ಕಾಲೇಜಿನ ಚರಿತಾ ಪೂಣಚ್ಚ ಎನ್ ಅವರು ಪ್ರಥಮ ಸ್ಥಾನ(584) ಹಾಗೂ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ವಿದ್ಯಾಶ್ರೀ ಬಿ.ಡಿ ದ್ವಿತೀಯ ಸ್ಥಾನ (582), ವಾಣಿಜ್ಯ ವಿಭಾಗದಲ್ಲಿ ಸಂತ ಜೋಸೆಫರ ಪಿಯು ಕಾಲೇಜಿನ ಸಪ್ಪನಾ ಕೆ.ಎ ಪ್ರಥಮ ಸ್ಥಾನ (588) ಹಾಗೂ ಗೊಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಜನಿತ್ ಬಿ.ಸಿ ದ್ವಿತೀಯ ಸ್ಥಾನ (584), ಕಲಾ ವಿಭಾಗದಲಿ ್ಲಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಜೀವ ಕೆ.ಪಿ ಪ್ರಥಮ ಸ್ಥಾನ (565) ಹಾಗೂ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದಿವ್ಯ ಎಸ್.ಕೆ ದ್ವಿತೀಯ ಸ್ಥಾನ (542) ಪಡೆದಿದ್ದು, ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸಿ.ಎಂ.ಮಹಾಲಿಂಗಯ್ಯ ಅವರು ಸ್ವಾಗತಿಸಿದರು, ಕಾಲೇಜಿನಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಉಪನ್ಯಾಸಕರಾದ ನಂದೀಶ್ ಅವರು ನಿರೂಪಿಸಿ, ವಂದಿಸಿದರು.
Previous Post
Next Post

0 Post a Comment: