ಕೊಡಗಿನಲ್ಲಿ ಮುಂದುವರೆದ ವಾಯು, ವರುಣನ ಅಬ್ಬರ: ಜಿಲ್ಲಾಡಳಿತದಿಂದ ಅಗತ್ಯ ಕ್ರಮ 



ಮಡಿಕೇರಿ:ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ವ್ಯಾಪಕ ಮಳೆಯಿಂದಾಗಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಮಡಿಕೇರಿ-ವಿರಾಜಪೇಟೆ, ಮಡಿಕೇರಿ-ಭಾಗಮಂಡಲ, ಭಾಗಮಂಡಲ-ಅಯ್ಯಂಗೇರಿ ರಸ್ತೆಗಳ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಕೊಡಗಿನ ದಕ್ಷಿಣ ಭಾಗದ ಲಕ್ಷ್ಮಣ ತೀರ್ಥ ನದಿ ಪ್ರದೇಶಗಳಲ್ಲಿ ಗದ್ದೆಗಳು ಜಲಾವೃತವಾಗಿವೆ. ಗ್ರಾಮೀಣ ರಸ್ತೆಗಳು ಅಲ್ಲಲ್ಲಿ ಕುಸಿಯುತ್ತಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಳಿ ಮತ್ತು ಗಾಳಿ ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಶಾಸಕರಾದ ಕೆ.ಜಿ.ಬೋಪಯ್ಯ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಾದ ಬೇಂಗೂರು, ಚೆಟ್ಟಿಮಾನಿ, ಭಾಗಮಂಡಲ, ತಣ್ಣಿಮಾನಿ, ಬೇತ್ರಿ, ಪಾಲಿಬೆಟ್ಟ, ಗೋಣಿಕೊಪ್ಪ ಸೇರಿದಂತೆ ದಕ್ಷಿಣ ಕೊಡಗಿನ ಹಲವು ಭಾಗಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಹಾಗೆಯೇ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಕ್ಕಂದೂರು, ಕರಡಿಗೋಡು, ನೆಲ್ಯಹುದಿಕೇರಿ, ಕುಶಾಲನಗರದ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆ ಜಲಾವೃತವಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಅವರು ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದರು. ಹಾಗೆಯೇ ಕುಶಾಲನಗರ ಪಟ್ಟಣದ ಕುವೆಂಪು ಹಾಗೂ ಸಾಯಿ ಬಡಾವಣೆ ಮತ್ತು ಮಾರುಕಟ್ಟೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಅಗತ್ಯವಿರುವ ಕಡೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಉಳಿದಂತೆ ಅಗತ್ಯವಿರುವ ಕಡೆಗಳಲ್ಲಿ ಪರಿಹಾರ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
Previous Post
Next Post

0 Post a Comment: