ಮಡಿಕೇರಿ: ಸದಾ ಕಾರ್ಯ ಒತ್ತಡದಲ್ಲಿರುವ ಪತ್ರಕರ್ತರು ಹಾಗೂ ಕೆಸರು ಗದ್ದೆಯಲ್ಲಿ ಒಮ್ಮೆಯೂ ನಡೆದಾಡಿದ ಅನುಭವ ಹೊಂದಿರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಕೆಸರು ಗದ್ದೆಯಲ್ಲಿ ಸಂಭ್ರಮಿಸಿದರು. ಇಬ್ನಿ ಸ್ಪ್ರಿಂಗ್ಸ್ ಕಾಟೇಜ್ ಹಾಗೂ ಗ್ರೀನ್ ಸಿಟಿ ಫೋರಂ ಆಶ್ರಯದಲ್ಲಿ ಇಬ್ನಿವಳವಾಡಿ ಗ್ರಾಮದಲ್ಲಿರುವ ಚೈಯ್ಯಂಡ ಸತ್ಯ ಗಣಪತಿ ಅವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ನಾಲ್ಕು ತಂಡಗಳು ಕೆಸರುಗದ್ದೆ ಹಾಂಡ್ ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ರೋಮಾಂಚನಕಾರಿಯಾಗಿದ್ದ ಪಂದ್ಯಾವಳಿಯಲ್ಲಿ ಪತ್ರಕರ್ತರು ತಮ್ಮ ದೈನಂದಿನ ಜಂಜಾಟ ಮರೆತು, ಕೆಸರುಗದ್ದೆ ಕ್ರೀಡಾಕೂಟದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿ ದ್ದರು. ಗದ್ದೆಯಲ್ಲಿ ಭತ್ತದ ನಾಟಿ
ಮಾಡುವುದರ ಮೂಲಕ ಪತ್ರಕರ್ತರು ಪುಳಕಿತರಾದರು. ಹಲವು ಪತ್ರಕರ್ತರು ಪ್ರಥಮ ಬಾರಿಗೆ ಭತ್ತದ ನಾಟಿ ಮಾಡಿದ ಅನುಭವ ಪಡೆದರು. ಕೆಲವು ಪತ್ರಕರ್ತರು ನಾಟಿ ಮಾಡಲು ಕಷ್ಟ ಪಟ್ಟರು. ಅನುಭವಿ ಪತ್ರಕರ್ತರಿಂದ ನಾಟಿ ಮಾಡುವುದನ್ನು ಕಲಿತುಕೊಂಡು ನಾಟಿ ಮಾಡಿದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಓಡಾಡುವುದರ ಮೂಲಕ ಸಂಭ್ರಮಿಸಿದರು. ಹಲವು ವಿದ್ಯಾರ್ಥಿಗಳು ಆತಂಕದಲ್ಲಿ ಗದ್ದೆಗೆ ಇಳಿದರು. ಫುಟ್ಬಾಲ್, ಥ್ರೋಬಾಲ್, ಹಗ್ಗಜಗ್ಗಾಟದಲ್ಲಿ ಎಳೆದಾಡುವುದರ ಮೂಲಕ ಸಂತಸ ಪಟ್ಟರು. ತಮ್ಮ ಇಚ್ಛೆಯಂತೆ ಭತ್ತದ ನಾಟಿ ಮಾಡಿದರು. ಯಾವ ವಿದ್ಯಾರ್ಥಿಗೂ ನಾಟಿ ಮಾಡುವ ಅನುಭವ ಇರಲಿಲ್ಲ. ತಮ್ಮ ಇಚ್ಛೆಯಂತೆ ಗದ್ದೆಯಲ್ಲಿ ನಾಟಿ ಮಾಡಿದರು. ಫಲಿತಾಂಶ ಕೆಸರುಗದ್ದೆ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕಿಶೋರ್ ರೈ ನಾಯಕತ್ವದ ಟೀಮ್ ನಾಟಿ ಬಾಯ್ಸ್ ತಂಡ ಪ್ರಥಮ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯಿತು. ತಂಡದಲ್ಲಿ ಉದಯ್ ಮೊಣ್ಣಪ್ಪ, ನವೀನ್ ಡಿಸೋಜ, ಮಣಿಕಂಠ, ಇಸ್ಮಾಯಿಲ್ ಕಂಡಕೆರೆ, ಸುರೇಶ್, ಲೋಹಿತ್ ಇದ್ದರು. ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಮನೋಜ್ ನಾಯಕತ್ವದ ತಂಡದ ದ್ವಿತೀಯ ಸ್ಥಾನ ಪಡೆಯಿತು. ತಂಡದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸುವರ್ಣ ಮಂಜು, ವಿನಯ್, ಜಾಕಿ ದಿವಾಕರ್, ಲೋಕೇಶ್ ಕಾಟಕೇರಿ ಇದ್ದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೆ.ಎ. ಆದಿತ್ಯ ನಾಯಕತ್ವದ ಪವರ್ ಬಾಯ್ಸ್ ಪ್ರಥಮ ಸ್ಥಾನ ಪಡೆಯಿತು. ತಂಡದಲ್ಲಿ ವಿಕಾಶ್, ರಾಕೇಶ್, ವಿನೋದ್, ಅಜ್ಜಮಕ್ಕಡ ವಿನು, ಎಂ.ಎನ್. ನಾಸೀರ್, ವಿಘ್ನೇಶ್ ಭೂತನಕಾಡು, ಕುಡೆಕಲ್ ಸಂತೋಷ್ ಇದ್ದರುಲ. ಅನು
ಕಾರ್ಯಪ್ಪ ನಾಯಕತ್ವದ ತಂಡ ಹ್ಯಾಂಡ್ ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ತಂಡದಲ್ಲಿ ಪ್ರೇಮ್ ಕಸ್ತೂರಿ, ನವೀನ್ ಸುವರ್ಣ, ಗೋಪಾಲ್ ಸೋಮಯ್ಯ, ಸುರ್ಜಿತ್, ರೋಷನ್, ಮಲ್ಲಿಕಾರ್ಜನ್ ಇದ್ದರು. ಬಹುಮಾನ ವಿತರಣೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಕೇಶ್, ನಿರ್ದೇಶಕರಾದ ಪಿ.ಕೃಷ್ಣಮೂರ್ತಿ ಇದ್ದರು.





0 Post a Comment: