ಮಡಿಕೇರಿ -ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸದ್ಯ ಯಾವುದೇ ರೀತಿಯ ಜೀವ ಹಾನಿ, ಜಾನುವಾರು ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರಥಮ ಆಧ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕಾರ್ಯ ಕೈಗೊಂಡಿದ್ದು, ಸಾರ್ವಜನಿಕರು ಜಿಲ್ಲಾಡಳಿತ ಜೊತೆ ಕೈಜೋಡಿಸುವಂತಾಗಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ ಅವರು ಕೋರಿದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 58 ಕೋಟಿ ರೂ. ಹಣವಿದ್ದು, ಸರ್ಕಾರದಿಂದ ಹಣದ ಕೊರತೆ ಇಲ್ಲ, ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಡಿ.ವಿ.ಸದಾನಂದ ಗೌಡ ಅವರು ಹೇಳಿದರು. ಕರ್ನಾಟಕದ ಉತ್ತರ ಭಾಗದಲ್ಲಿ ಪ್ರವಾಹ ಉಂಟಾಗಿ ಮನೆ ಮಠ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಮಾಜಿ ಸಚಿವರಾದ ಈಶ್ವರಪ್ಪ ಅವರ ನೇತೃತ್ವದ ತಂಡವನ್ನು ಕಳುಹಿಸಿಕೊಡಲಾಗಿದೆ ಎಂದರು. ಗೋಣಿಕೊಪ್ಪ, ಭಾಗಮಂಡಲ, ಕುಶಾಲನಗರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ ಎಂದರು. ಭಾಗಮಂಡಲ ಬಳಿಯ ಕೋರಂಗಾಲದಲ್ಲಿ ಭೂ ಕುಸಿತದಿಂದ ನಾಲ್ವರು ಜೀವ ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ತಕ್ಷಣವೇ ಜಿಲ್ಲಾಧಿಕಾರಿ ನೀಡಲಿದ್ದಾರೆ ಎಂದರು. ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ದೂರವಾಣಿ ಸಂಪರ್ಕ ಕಡಿತವಾಗಿದ್ದು, ಕೂಡಲೇ ಸರಿಪಡಿಸುವಂತೆ ಬಿಎಸ್ಎನ್ಎಲ್ ಅಧಿಕಾರಿಗೆ ಸೂಚಿಸಲಾಗಿದೆ ಎಂದರು. ಎನ್ಡಿಆರ್ಎಫ್ನ 40 ಜನರ ತಂಡ ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಸಹ 2 ಎನ್ಡಿಆರ್ಎಫ್ ತಂಡ ಕೊಡಗು ಜಿಲ್ಲೆಗೆ ಆಗಮಿಸಿದೆ ಎಂದು ಕೇಂದ್ರ ರಸಗೊಬ್ಬರ ಸಚಿವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 604 ಕುಟುಂಬಗಳ ಒಟ್ಟು 2,136 ಸಂತ್ರಸ್ಥರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಹಾಗೆಯೇ 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ 14 ಕಡೆಗಳಲ್ಲಿ ಭೂ ಕುಸಿತ ಹಾಗೂ ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಹಲವು ಪ್ರವಾಹ ಪೀಡಿತ ಪ್ರದೆಶಗಳಿಗೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಜೊತೆಗೆ ಜಿಲ್ಲಾಡಳಿತದ ಜೊತೆ ಕೈಜೋಡಿಸಿದ್ದಾರೆ ಎಂದರು. ಪ್ರಕೃತಿ ವಿಕೋಪ ಎದುರಿಸಲು ಈಗಾಗಲೇ ಮೂರು ತಾಲ್ಲೂಕಿನ ತಹಶೀಲ್ದಾರರಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ತಲಾ 50 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿಗಳಿಗೆ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಏರ್ಲಿಪ್ಟ್ ಅಗತ್ಯವಿದ್ದಲ್ಲಿ ಅದನ್ನು ಸಹ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. ಶಾಸಕರಾದ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಜಿಲ್ಲಾಡಳಿತದ ಜೊತೆ ಸಹಕರಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಬೇಕು ಎಂದು ಅವರು ಕೋರಿದರು. ಶಾಸಕರಾದ ವಿ.ಸೋಮಣ್ಣ ಅವರು ಜಿಲ್ಲಾಡಳಿತಕ್ಕೆ ಈಗಾಗಲೇ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಶಾಸಕರಾದ ಸಿ.ಟಿ.ರವಿ, ಎಂ.ಪಿ.ಅಪ್ಪಚ್ಚುರಂಜನ್, ಪ್ರೀತಂ ಗೌಡ, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಸಂಸತ್ ಸದಸ್ಯರಾದ ಪ್ರತಾಪ್ ಸಿಂಹ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಇತರರು ಇದ್ದರು.


0 Post a Comment: