ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲು ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡ ಮನವಿ


ಮಂಗಳೂರು :  ಕರ್ನಾಟಕ ಮತ್ತು ಕೇರಳದಲ್ಲಿ ಪ್ರಾಕೃತಿಕ ವಿಕೋಪಗಳ ಸರಮಾಲೆಯ ನಡುವೆಯೇ ಈ ಬಾರಿ ಮುಸಲ್ಮಾನ ಬಾಂಧವರ ಬಕ್ರೀದ್ ಹಬ್ಬ ಬಂದಿದೆ. ಹೀಗಾಗಿ ಈ ಹಬ್ಬವನ್ನು ಸರಳವಾಗಿ ಆಚರಿಸಲು ಮುಸಲ್ಮಾನ ಬಾಂಧವರು ತೀರ್ಮಾನಿಸಿದ್ದಾರೆ. ಬಕ್ರೀದ್ ಹಬ್ಬಕ್ಕೆ ಮಾನವ ಬಲಿಯೊಂದರ ಹಿನ್ನೆಲೆಯಿದೆ. ಪ್ರವಾದಿಗಳನ್ನು ಅಲ್ಲಾಹು ನೂರಾರು ಪರೀಕ್ಷೆಗೆ ಒಡ್ಡುತ್ತಾನೆ. ಪ್ರವಾದಿಯಾಗಿದ್ದ ಇಬ್ರಾಹಿಂ ನಬಿಯವರಿಗೆ ಒಂದು ದಿನ ಕನಸಿನಲ್ಲಿ 'ನಿನ್ನ ಮಗ ಇಸ್ಮಾಯಿಲ್ ನನ್ನು ನನಗೆ ಬಲಿ ಕೊಡಬೇಕು ಎಂದು ಅಲ್ಲಾಹ ಆಜ್ಞಾಪಿಸುತ್ತಾನೆ. ಇಬ್ರಾಹೀಂ ಕೂಡಲೇ ಕಾರ್ಯ ಪ್ರವೃತ್ತರಾಗುತ್ತಾರೆ. ಅಲ್ಲಾಹನ ಆಜ್ಞೆಯನ್ನು ಪತ್ನಿ ಹಾಜಿರಾಗೆ ತಿಳಿಸಿ ಆಕೆಯ ಅನುಮತಿ ಮೇರೆಗೆ ಮಗನನ್ನು ಕೋಹ್ ಪರ್ವತದ ಬಳಿಗೆ ಕರೆದೊಯ್ಯುತ್ತಾರೆ. ಪ್ರವಾದಿ ಇಬ್ರಾಹಿಂ ತಮ್ಮ ಮಗ ಇಸ್ಮಾಯಿಲ್ ನನ್ನು ಬಲಿಕೊಡಲು ಸನ್ನದ್ದರಾದ ಕೂಡಲೇ ಅಶರೀರವಾಣಿಯೊಂದು ಮೊಳಗುತ್ತದೆ. ಪವಾಡ ಸದೃಶವೆಂಬಂತೆ ಇಸ್ಮಾಯಿಲ್ ಬದುಕುಳಿಯುತ್ತಾನೆ. ಮಗನ ಬದಲಾಗಿ ದುಂಬ ಎನ್ನುವ ಕುರಿ ಹತವಾಗಿ ಬಿದ್ದಿರುತ್ತದೆ. ಹೀಗೆ ಮಾನವ ಬಲಿ ಆಚರಣೆ ಪದ್ಧತಿ ತಪ್ಪಿಸಿದ ಕೀರ್ತಿ ಪ್ರವಾದಿ ಇಬ್ರಾಹಿಂ ಅವರಿಗೆ ಸಲ್ಲುತ್ತದೆ.ಮಾನವ ಬಲಿಗೆ ಬದಲಾಗಿ ಕುರಿ, ಮೇಕೆ, ಒಂಟೆ ಬಲಿ ನೀಡುವ ಆಚರಣೆ ಬಂದದ್ದು ಈ ಕಾರಣದಿಂದ. ಬಕ್ರೀದ್ ದಿನದಂದು ಪ್ರಾಣಿಗಳನ್ನು ಬಂಧುಬಳಗಕ್ಕೆ ದಾನ ನೀಡುವ ಪದ್ಧತಿ ಆವತ್ತಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಕುರ್ಬಾನಿ ಎನ್ನುತ್ತಾರೆ. ಹಬ್ಬಕ್ಕೆ ಮುಸ್ಲಿಮರ ಪವಿತ್ರ ತೀರ್ಥಯಾತ್ರೆ ಹಜ್ ಮೆರಗು ನೀಡುತ್ತದೆ. ಕಾಬಾ ಮತ್ತು ಪ್ರವಾದಿ ಮಹಮ್ಮದ್ ಅವರ ಸಮಾಧಿ ಸ್ಥಳವಾದ ಮದೀನಾವನ್ನು ಸಂದರ್ಶಿಸುವುದು ಹಜ್ ಮಾಡುವ ಕ್ರಿಯೆಗಳಲ್ಲಿ ಪ್ರಮುಖ. ಹಜ್ ಮಾಡುವುದರಿಂದ ಸಂಕಷ್ಟ ನಿವಾರಣೆಯಾಗುತ್ತದೆ. ಪಾಪಕಾರ್ಯ ಕಳೆದು ಹೋಗುತ್ತದೆ. ಹಜ್ ಮಾಡುತ್ತ ಹಾದಿಯಲ್ಲಿ ಸತ್ತರೂ ಅಂತಹ ಯಾತ್ರಾರ್ಥಿಗಳಿಗೆ ಪುಣ್ಯ ಲಭಿಸುತ್ತದೆ ಎಂಬುದು ಮುಸಲ್ಮಾನರ ಪ್ರಶ್ನಾತೀತ ನಂಬಿಕೆ. ಈ ಬಾರಿ ಕರ್ನಾಟಕದ ಕೆಲವು ಪ್ರದೇಶ ಮತ್ತು ಕೇರಳ ರಾಜ್ಯದಲ್ಲಿ ಮಹಾಮಳೆಯಿಂದ ಸಾವಿರಾರು ಜನ ಸಂಕಷ್ಟದಲ್ಲಿದ್ದಾರೆ. ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮನೆಮಠ ಕಳೆದು ಕೊಂಡವರ ಲೆಕ್ಕ ಸಿಗುತ್ತಲೇ ಇಲ್ಲ. ಹೀಗಾಗಿ ಆಡಂಬರದ ಹಬ್ಬ ನಡೆಸದಿರಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ. "ನಿನ್ನ ನೆರೆಹೊರೆಯವರು ಸಂಕಷ್ಟದಲ್ಲಿರುವಾಗ ನೀನು ಸಂಭ್ರಮ ಪಡಬೇಡ ; ಅವರ ನೆರವಿಗೆ ಧಾವಿಸು" ಎನ್ನುತ್ತದೆ ಪ್ರವಾದಿ ಸಂದೇಶ. ಈ ಹಿನ್ನೆಲೆಯಲ್ಲಿ ಮುಸಲ್ಮಾನ ಬಾಂಧವರು ಸರಳವಾಗಿ ಹಬ್ಬ ಆಚರಿಸಲು ತೀರ್ಮಾನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಹಬ್ಬವನ್ನು ಸರಳವಾಗಿ ಆಚರಿಸಲು ಒತ್ತು ನೀಡುವಂತೆ ಬ್ಲಡ್ ಡೋನರ್ಸ್ ಮಂಗಳೂರು(ರಿ)ತಂಡ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡುತ್ತಾ ಈ ಹಬ್ಬವು ನಮ್ಮಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಹಾರೈಸುತ್ತಿದೆ. 
 ವರದಿ:ಬ್ಲಡ್ ಡೋನರ್ಸ್ ಮಂಗಳೂರು(ರಿ) ಮಾಧ್ಯಮ ವಿಭಾಗ
Previous Post
Next Post

0 Post a Comment: