ಆರ್ಥಿಕ ಕುಸಿತದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳು ಹಾಸ್ಯಾಸ್ಪದ : ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ


ನವದೆಹಲಿ (TOC ನ್ಯೂಸ್): ದೇಶದ ಆರ್ಥಿಕ ಬೆಳವಣಿಗೆ ಕುಸಿಯಲು ತಮ್ಮದೇ ಆದ ಕಾರಣ ನೀಡುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಕ್ರಿಕೆಟ್‌ ಪ್ರಪಂಚದ ಉದಾಹರಣೆ ನೀಡುವ ಮುಖೇನ ಸರ್ಕಾರವನ್ನು ಗೇಲಿ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಿಯಾಂಕ ಗಾಂಧಿ ಬೌಂಡರಿ ಲೈನ್‌ ಬಳಿ ಬಾಲ್‌ ಅನ್ನು ಕ್ಯಾಚ್‌ ಹಿಡಿಯಲು ಕಷ್ಟಪಡುವ ಫೀಲ್ಡರ್‌ನ ಕ್ರಿಕೆಟ್‌ ವಿಡಿಯೋವೊಂದನ್ನು ಶೇರ್‌ ಮಾಡಿಕೊಳ್ಳುವ ಮೂಲಕ, ಒಂದೊಳ್ಳೆ ಕ್ಯಾಚ್‌ ಅನ್ನು ಹಿಡಿಯಲು ನಿಮ್ಮ ಕಣ್ಣುಗಳನ್ನು ಬಾಲ್‌ ಮೇಲಿಡುವುದು ಮುಖ್ಯ ಮತ್ತು ಆಟದ ನಿಜವಾದ ಮನೋಭಾವವನ್ನು ಹೊಂದಬೇಕು. ಇಲ್ಲದಿದ್ದರೆ ಹೀಗೆ ಗುರುತ್ವ, ಗಣಿತ, ಓಲಾ-ಉಬರ್‌ ಮತ್ತು ಇತರೆ ವಿಚಾರಗಳನ್ನು ದೂಷಿಸುತ್ತಾ ಕೂರಬೇಕಾಗುತ್ತದೆ. ಭಾರತೀಯ ಅರ್ಥ ವ್ಯವಸ್ಥೆಯ ಜನಹಿತಕ್ಕಾಗಿ ಜಾರಿ ಎಂದು ಗೇಲಿ ಮಾಡಿದ್ದಾರೆ.

ಕೇಂದ್ರದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ನೀವು ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು ಎದುರು ನೋಡುತ್ತಿದ್ದರೆ ದೇಶವು ಶೇ. 12ರಷ್ಟು ಬೆಳವಣಿಗೆ ಸಾಧಿಸಬೇಕಿದೆ. ಇಂದು ಶೇ. 6ರಷ್ಟು ಬೆಳವಣಿಗೆಯಾಗಿದೆ. ದೇಶದ ಅಭಿವೃದ್ಧಿಯನ್ನು ಗಣಿತದ ಮೂಲಕ ಅಳೆಯಬಾರದು. ಭೂಮಿಯ ಗುರುತ್ವಾಕರ್ಷಣೆ ಸಂಶೋಧನೆಗೆ ಐನ್​ಸ್ಟೀನ್‌ಗೆ ಗಣಿತ ಸಹಾಯ ಮಾಡಿರಲಿಲ್ಲ ಎಂದು ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದರು. ಗುರುತ್ವಾಕರ್ಷಣೆ ಬಲವನ್ನು ಸಂಶೋಧನೆ ಮಾಡಿದ ವಿಜ್ಞಾನಿ ಐನ್​ಸ್ಟೀನ್ ಅಲ್ಲ, ಐಸಾಕ್ ನ್ಯೂಟನ್ ಎಂದು ಟ್ರೋಲಿಗರು ಪಿಯೂಷ್ ಗೋಯಲ್ ಅವರ ಕಾಲೆಳೆದಿದ್ದರು. ಈ ಸಂಬಂಧ ಹಲವರು ಟೀಕೆ ವ್ಯಕ್ತಪಡಿಸಿದ್ದರು.

Previous Post
Next Post

0 Post a Comment: