ಹಿಂದಿ ಹೇರಿಕೆ ಒಪ್ಪಲು ಸಾಧ್ಯವಿಲ್ಲ: ಎಸ್‍ಡಿಪಿಐ
ಬೆಂಗಳೂರು (TOC ನ್ಯೂಸ್): ಹಿಂದಿ ಭಾಷೆಯನ್ನು ದೇಶದ ಸರ್ವಜನರ ಭಾಷೆಯನ್ನಾಗಿ ವಿಧಿಸುವ ಹಾಗೂ ದೇಶದಾದ್ಯಂತ 'ಹಿಂದಿ ದಿವಸ'ವನ್ನು ಹೇರುವ ಬಿಜೆಪಿ ಸರಕಾರದ ಧೋರಣೆ ದಾರ್ಷ್ಟ್ಯದಿಂದ ಕೂಡಿದ್ದು, ಇದು ದೇಶದ ಅಖಂಡತೆಗೆ ನೀಡಿದ ದೊಡ್ಡ ಬೆದರಿಕೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ. ದೇಶದಲ್ಲಿ 22 ಶೆಡ್ಯೂಲ್ಡ್ ಭಾಷೆಗಳಿದ್ದು ಅದರಲ್ಲಿ ಹಿಂದಿಯೂ ಒಂದಾಗಿರುತ್ತದೆ. ಇದರಲ್ಲಿ ಒಳಗೊಂಡ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ, ಬೆಂಗಾಳಿ ಮುಂತಾದ ಭಾಷೆಗಳನ್ನು ದೇಶದ ಹೆಚ್ಚಿನ ಜನರು ಆಡುತ್ತಿದ್ದು, ಎಲ್ಲ ಭಾಷೆಗಳು ಸಮಾನ ಸ್ಥಾನಮಾನವನ್ನು ಹೊಂದಿವೆ. ಯಾವುದೇ ಒಂದು ಭಾಷೆಯನ್ನು ಇನ್ನೊಂದು ಭಾಷಿಗರ ಮೇಲೆ ಹೇರುವಂತಿಲ್ಲ. ದೇಶದಾದ್ಯಂತ ಹಿಂದಿ ದಿವಸವನ್ನು ಹೇರುತ್ತಿರುವುದು ಮತ್ತು ಸರಕಾರಿ ದಾಖಲೆಗಳಲ್ಲಿ ಹಿಂದಿ ಕಡ್ಡಾಯ ಮಾಡುವುದರಲ್ಲಿ ಇತರ ಅಧಿಕೃತ ಭಾಷೆಗಳನ್ನು ಮುಗಿಸುವ ಹುನ್ನಾರ ಅಡಗಿದೆ. ಇದನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ. ಒಂದುವೇಳೆ ಕೇಂದ್ರ ಸರಕಾರವು ಇದೇ ರೀತಿ ತನ್ನ ಧೋರಣೆಯಲ್ಲಿ ನಿಲ್ಲುವುದಾದರೆ ಕನ್ನಡ ಭಾಷಿಗರೆಲ್ಲರೂ ಭಾರೀ ಹೋರಾಟ ನಡೆಸಲಿದ್ದಾರೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದ್ದಾರೆ.
0 Post a Comment: