ಕಾಲ್ಚೆಂಡು ಪಂದ್ಯಾಟ: ಬ್ಲೂ ಟೈಗರ್ಸ್ ಚೆಟ್ಟಳ್ಳಿ ಚಾಂಪಿಯನ್ 


ಚೆಟ್ಟಳ್ಳಿ; ಗೌರಿ ಗಣೇಶ ಪ್ರಯುಕ್ತ ಚೆಟ್ಟಳ್ಳಿ ಸಮೀಪದ ಕಾಫಿಸಿಟಿ ಕಾಫಿಬೋರ್ಡ್ ಫುಟ್ಬಾಲ್ ಕ್ಲಬ್ ವತಿಯಿಂದ ಏಕದಿನ ಚೆಟ್ಟಳ್ಳಿ ಗ್ರಾಮ‌ ಪಂಚಾಯತಿ ಮಟ್ಟದ "ಸೂಪರ್ ಫೈವ್" ಕಾಲ್ಚೆಂಡು ಪಂದ್ಯಾಟವು ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಫೈನಲ್ ಪಂದ್ಯಾಟದಲ್ಲಿ ಬ್ಲೂ ಟೈಗರ್ಸ್ ತಂಡವು ೨-೧ ಗೋಲುಗಳ ಅಂತರದಿಂದ ಕಾಫಿ ಲವ್ವರ್ಸ್ ತಂಡವು ಮಣಿಸಿ ಪ್ರಥಮ ಸ್ಥಾನ ಪಡೆಯಿತು. ಕಾಫಿ ಲವ್ವರ್ಸ್ ತಂಡವು‌ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು‌ ಆತಿಥೇಯ ಕಾಫಿ ಸಿಟಿ ಹಾಗೂ ಕಾಫಿ ಲವ್ವರ್ಸ್ ತಂಡಗಳ ನಡುವೆ ನಡೆಯಿತು. ಕಾಫಿ ಲವ್ವರ್ಸ್ ತಂಡವು ರಾಜೇಶ್ ಅವರ ಅಮೋಘ ಒಂದು ಗೋಲಿನ‌ ನೆರವಿನಿಂದ ೧-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಬ್ಲೂ ಟೈಗರ್ಸ್ ಹಾಗೂ ಎಫ್.ಸಿ‌ ಕಂಡಕರೆ ತಂಡಗಳ ನಡುವೆ ನಡೆಯಿತು. ಬ್ಲೂ ಟೈಗರ್ಸ್ ತಂಡವು ಮಿಥುನ್ ಹಾಗೂ ಅಜಿತ್ ಅವರ ತಲಾ ಒಂದು ಗೋಲಿನ ಮೂಲಕ ೨-೦ ಗೋಲುಗಳ ಅಂತರದಿಂದ ಗೆದ್ದಿತು. ಪಂದ್ಯಾಟ ಅತ್ಯುತ್ತಮ ಆಟಗಾರ ಬ್ಲೂ ಟೈಗರ್ಸ್ ತಂಡದ ಅಜಿತ್, ಬೆಸ್ಟ್ ಗೋಲ್ ಕೀಪರ್ ಕಾಫಿ ಲವ್ವರ್ಸ್ ತಂಡದ ಭುವನ್ ಪಡೆದುಕೊಂಡರು. ಜಂಶಾದ್, ಆಲಿ, ಮಿಥುನ್, ಲತೀಫ್, ವಿರೂಪಾಕ್ಷ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

Previous Post
Next Post

0 Post a Comment: