#ಸ್ನೇಹಜೀವಿ ಅಡ್ಕ
ಇಂದು ಬೆಳ್ಳಂಬೆಳಗ್ಗೆ ಪುತ್ತೂರು ಹಾಗೂ ಕೊಡಗಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದ ಭೀಕರ ದುರಂತದಲ್ಲಿ ಒಂದೇ ಮನೆಯ ನಾಲ್ಕು ಮಂದಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದ್ದವು. ಆ ನಾಲ್ಕು ಶವಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಹಲವರು ಅಂತಿಮ ದರ್ಶಕನಕ್ಕಾಗಿ ಬರುತ್ತಿದ್ದರು, ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕನ್ ರೊಂದಿಗೆ ಒಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದವರು, ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಹೇಮಲತಾರೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದ್ದವರು ಸಹಿತ ಅವರ ಮನೆಯ ಅಕ್ಕ -ಪಕ್ಕದ ನೂರಾರು ಮಂದಿ ಆಗಮಿಸುತ್ತಲೇ ಇದ್ದರು. ಸೌಮ್ಯ ಸ್ವಭಾವದ ಸಹೃದಯಿ ವ್ಯಕ್ತಿತ್ವ ಆಗಿರುವುದರಿಂದಲೇ ಆ ಕುಟುಂಬದ ಕುರಿತು ಎಲ್ಲರಿಗೂ ಉತ್ತಮ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದವು. ಧರ್ಮದ ಹೆಸರೇಳಿ ಬಡಿದಾಡುವ ಪ್ರಸ್ತುತ ಕಾಲದಲ್ಲೂ ಶುಂಠಿಕೊಪ್ಪದ ಹಲವು ಮುಸ್ಲಿಂ ಸಹೋದರರೂ ಕೂಡ ಅಲ್ಲಿ ಹಾಜರಿದ್ದು, ಉತ್ತಮ ವ್ಯಕ್ತಿತ್ವದ ಆತ್ಮೀಯರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದರು. ತಂದೆ, ತಾಯಿ, ತಮ್ಮ, ತಂಗಿಯನ್ನು ಕಳೆದುಕೊಂಡ ಉಳಿದ ಏಕೈಕ ಮಗಳ ಅವಸ್ಥೆಯಾದರೂ ಹೇಗಿರಬೇಡ ಅಲ್ವಾ? ಮೂಡಬಿದ್ರೆಯ ಖಾಸಗಿ ಸಂಸ್ಥೆಯೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ಕರೆದುಕೊಂಡು ಬಂದಾಗ ನೀವೆಲ್ಲಾ ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ನನ್ನನ್ನು ಬಿಟ್ಟಾಕಿ ನಾನು ಹೋಗುತ್ತೇನೆ ಅಂತ ಹಠ ಹಿಡಿದಾಗ ಆಕೆಯನ್ನು ಸಮಾಧಾನ ಪಡಿಸಿದರೂ, ಆಕೆಗಿನ್ನೂ ತನ್ನನ್ನು ಬಿಟ್ಟು ಮನೆಯವರೆಲ್ಲರೂ ಅಂತಿಮ ಯಾತ್ರೆ ಹೇಳಿ ಹೊರಟು ಹೋಗಿದ್ದಾರೆ ಅನ್ನುವ ವಾಸ್ತವ ಸತ್ಯ ಅರಿವಿರಲಿಲ್ಲ. ಶವಾಗಾರದ ಬಾಗಿಲು ತೆರೆದು ಒಳಹೋದಾಗಲೇ ಆಗಿತ್ತು ಅವಳಿಗೆ ಗೊತ್ತಾದದ್ದು ತನ್ನವರೆಲ್ಲರೂ ನಿಶ್ಚಲವಾಗಿ ಮಲಗಿದ್ದಾರೆಂದು. ಅಮ್ಮಾ.. ನನ್ನನ್ನು ಇವತ್ತು ನೋಡಲು ಬರುತ್ತೇನೆ ಅಂತೇಳಿದವರು ಯಾಕೆ ಬಂದಿಲ್ಲ ಅಮ್ಮಾ.. ಒಮ್ಮೆ ಮಾತನಾಡು ಅಂತ ಗೋಗರೆಯುತ್ತಾ, ಅಪ್ಪಾ...ಎದ್ದೇಳಿಯಪ್ಪಾ... ಯಶ್ಸೂ ನೀನಾದರೂ ಮಾತನಾಡು ಅಂತೆಲ್ಲಾ ಗೋಗರೆಯುತ್ತಾ ಬೊಬ್ಬಿರಿಯುವಾಗ ಅಲ್ಲಿ ಸೇರಿದವರೆಲ್ಲರ ಕಣ್ಣುಗಳಿಂದ ನೀರುಗಳು ಧಾರಾಕಾರವಾಗಿ ಇಳಿಯುತ್ತಲೇ ಇತ್ತು. ಎಲ್ಲರನ್ನೂ ಕಳೆದುಕೊಂಡ ಆಕೆಗೆ ಸಾಂತ್ವನ ಹೇಳುವುದಾದರೂ ಹೇಗೆ ತಾನೇ? ಹಲವು ಬಾರಿ ಮುನ್ನಚ್ಚೆರಿಕೆ ನೀಡಿದಾಗ ಆ ಕೆರೆಯನ್ನು ಮುಚ್ಚುತ್ತಿದ್ದರೆ ಇಂದು ಆ ನಾಲ್ಕು ಜೀವಗಳಾದರೂ ಉಳಿಯುತ್ತಿತ್ತೇನೋ ಅಲ್ವಾ? ಏನೇ ಆದರೂ ವಿಧಿಯ ಮುಂದೆ ತಲೆ ಬಾಗಲೇಬೇಕು. ಇಂದು ಅವರಾದರೆ ನಾಳೆ ನಾವಾಗಿರಲೂಬಹುದು. ಇಂತಹ ಅಪಘಾತಗಳಿಂದ ಸರ್ವಶಕ್ತನು ನಮ್ಮನ್ನು ಕಾಪಾಡಲಿ. ಆ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ.

0 Post a Comment: