ಸೇವಾ ಮನೋಭಾವ, ನಾಯಕತ್ವಕ್ಕೆ ಇಂಟರ್ಯಾಕ್ಟ್‍ನಿಂದ  ಪ್ರೇರಣೆ - ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್ ಜಗದೀಶ್ 


ಮಡಿಕೇರಿ (TOC ನ್ಯೂಸ್):ಶಾಲಾ ದಿನದಿಂದಲೇ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದು ಇಂಟರ್ಯಾಕ್ಟ್ ಕ್ಲಬ್‍ನ ಉದ್ದೇಶವಾಗಿದೆ. ಸ್ವಯಂ ಪೋಷಕತ್ವ ಹಾಗೂ ಸ್ವ ಆಡಳಿತ ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ರೋಟರಿ ಮಿಸ್ಟಿ ಹಿಲ್ಸ್ ಕೊಡಗಿನಲ್ಲೂ  ಆಯ್ದ ಶಾಲಾ ಕಾಲೇಜುಗಳಲ್ಲಿ ತನ್ನ ಘಟಕಗಳನ್ನು ಆರಂಭಿಸುತ್ತಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಎಂ.ಆರ್. ಜಗದೀಶ್ ಹೇಳಿದರು.
ಆವರು ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ಇಂಟರ್ಯಾಕ್ಟ್ ಕ್ಲಬ್ ಅನ್ನು ಉದ್ಘಾಟಿಸಿ ಮಾತನಾಡಿದರು. ಅಮೇರಿಕಾದ ಚಿಕಾಗೋ ನಗರದಲ್ಲಿ ಒಂದುನೂರು ವರ್ಷಗಳ ಹಿಂದೆ ಆರಂಭವಾದ ರೋಟರಿ ಸಂಸ್ಥೆ ಪ್ರಪಂಚದಾದ್ಯಂತ 30,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. 1962 ರಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಆರಂಭಿಸಲಾಗಿದ್ದು 12 ರಿಂದ 18 ವಯಸ್ಸಿನ ಮಕ್ಕಳಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡಿದ್ದ ರೊಟೇರಿಯನ್ ಅಂಬೆಕಲ್ ವಿನೋದ್ ಮಾತನಾಡುತ್ತ, ಇಂಟರ್ಯಾಕ್ಟ್ ಕ್ಲಬ್ ಒಂದು ಸೇವಾ ಸಂಸ್ಥೆಯಾಗಿ ಉತ್ತಮ ಪರಿಸರವನ್ನು ರೂಪಿಸಲು, ಸಹಾಯ ಮತ್ತು ಸ್ವಯಂ ಸೇವಾಗುಣಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸುತ್ತದೆ. ಇದಕ್ಕೆ ಪೂರಕವಾಗಿ ಕ್ಲಬ್‍ನ ಸದಸ್ಯರಿಗೆ ತರಬೇತಿಗಳನ್ನು ನೀಡಲಾಗುತ್ತದೆ ಎಂದರು.
ರೋಟರಿ ಇಂಟರ್ಯಾಕ್ಟ್ ಚೇರ್‍ಮನ್ ರೊಟೇರಿಯನ್ ಮಧುಸೂದನ್ ಮಾತನಾಡಿ ಯಾವುದೇ ಕೆಲಸ ಮಾಡುವ ಮೊದಲು ಚತುರ್ವಿಧ ಪರೀಕ್ಷೆಗಳಿಗೆ ಪ್ರತಿಯೊಬ್ಬರೂ ತಮ್ಮನ್ನು ಒಡ್ಡಿಕೊಳ್ಳಬೇಕು. ಅವುಗಳೆಂದರೆ ಯೋಚಿಸಿಮಾಡು, ಇದು ನ್ಯಾಯವೇ, ಇದರಿಂದ ಸ್ನೇಹ ಬೆಳೆಯಬಹುದೇ, ಎಲ್ಲರಿಗೂ ಅನುಕೂಲಕರವಾಗಿರುವುದೇ ಎಂದು ಚಿಂತಿಸುವಂತಾಗಬೇಕು. ಆಗ ಆ ಕೆಲಸ ಸಮಾಜಕ್ಕೆ ಅನುಕೂಲವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಬಿ.ಟಿ. ಲಿಪಿನ್ ಹಾಗೂ ಕಾರ್ಯದರ್ಶಿಯಾಗಿ ಎಂ.ಜೆ. ಪ್ರೀತಾ ಆಯ್ಕೆಯಾದರು. ಇವರ ಪದಗ್ರಹಣ ಪ್ರತಿಜ್ಞಾ ವಿಧಿಯನ್ನು ರೊಟೇರಿಯನ್ ವಿನೋದ್ ಅವರು ಬೋಧಿಸಿದರು. ನೂತನ ಘಟಕಕ್ಕೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 5000 ರೂಪಾಯಿಗಳನ್ನು ಹಾಗೂ ಶಾಲಾ ಗ್ರಂಥಾಲಯಕ್ಕೆ 100 ಪುಸ್ತಕಗಳನ್ನು ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ಹಸ್ತಾಂತರಿಸಿದರು.
 ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿಹಿಲ್ಸ್ ನಿಯೋಜಿತ ಅಧ್ಯಕ್ಷ ಪಿ. ಸಂದೀಪ್, ಭಾರತಿ ಹೈಸ್ಕೂಲ್ ಸೊಸೈಟಿ ಅಧ್ಯಕ್ಷ ಕಟ್ಟೆಮನೆ ಸೋನಜಿತ್, ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಸಂಘಟನಾ ಶಿಕ್ಷಕಿ ಬಿ.ಬಿ. ಪೂರ್ಣಿಮ, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಭಾರತಿ ಹೈಸ್ಕೂಲ್ ಸೊಸೈಟಿಯ  ಆಡಳಿತ ಮಂಡಳಿಯ ನಿರ್ದೇಶಕರುಗಳು, ಶಿಕ್ಷಕವರ್ಗದವರು ಉಪಸ್ಥಿತರಿದ್ದರು. ಹೆಚ್.ಎನ್. ಶೃತಿ ನಿರೂಪಿಸಿದರು, ಪಿ.ಪಿ. ಡಯಾನ ಸ್ವಾಗತಿಸಿ ಬಿ.ಎಸ್. ಪಯಸ್ವಿನಿ ವಂದಿಸಿದರು.
Previous Post
Next Post

0 Post a Comment: