ಸೌದಿ ಅರೇಬಿಯಾ (TOC ನ್ಯೂಸ್): ಸೌದಿ ಅರೇಬಿಯಾದ ಸೌದಿ ಅರ‍್ಯಾಂಕೋ ತೈಲ ಕಂಪನಿಗೆ ಸೇರಿದ ಸಂಸ್ಕರಣಾ ಘಟಕ ಮತ್ತು ತೈಲ ನಿಕ್ಷೇಪದ ಮೇಲೆ ಡ್ರೋಣ್ ಮೂಲಕ ದಾಳಿ ನಡೆದಿದೆ. ದಾಳಿ ನಡೆದ ಸ್ಥಳದಲ್ಲಿ ಬೆಂಕಿ ಆವರಿಸಿದ್ದು, ಕಂಪನಿ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಶನಿವಾರ ಬೆಳಗ್ಗೆ (ಸ್ಥಳೀಯ ಕಾಲಮಾನ) ಖುರೈಸ್ನಲ್ಲಿರುವ ತೈಲ ನಿಕ್ಷೇಪ ಮತ್ತು ಬುಖ್ವಾಕ್ನಲ್ಲಿರುವ ತೈಲ ಸಂಸ್ಕರಣಾ ಘಟಕದ ಮೇಲೆ ಡ್ರೋಣ್ನಿಂದ ದಾಳಿ ನಡೆಸಲಾಗಿದೆ. ಬೆಂಕಿಯನ್ನು ನಂದಿಸಲು ಕಂಪನಿಯ ಸಿಬ್ಬಂದಿ ಮತ್ತು ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಘಟನೆಯಲ್ಲಿ ಯಾರಾದರೂ ಮೃತಪಟ್ಟಿರುವ ಆಥವಾ ಗಾಯಗೊಂಡಿರುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.
ದಾಳಿಗೊಳಗಾಗಿರುವ ತೈಲ ಸಂಸ್ಕರಣೆ ಘಟಕದಲ್ಲಿ ತೈಲವನ್ನು ಸಂಸ್ಕರಿಸಿ ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದಲ್ಲಿರುವ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತದೆ. ಇಲ್ಲಿ ಪ್ರತಿ ದಿನ 70 ಲಕ್ಷ ಬ್ಯಾರಲ್ ಕಚ್ಛಾ ತೈಲವನ್ನು ಸಂಸ್ಕರಿಸಲಾಗುತ್ತದೆ. ಈ ಘಟಕದ ಮೇಲೆ 2006ರ ಫೆಬ್ರವರಿಯಲ್ಲಿ ಅಲ್ ಖೈದಾ ಉಗ್ರರು ಆತ್ಮಹುತಿ ಬಾಂಬ್ ದಾಳಿ ನಡೆಸಲು ಪ್ರಯತ್ನಿಸಿದ್ದರು. ಆದರೆ ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿತ್ತು.
ಈಗ ಡ್ರೋಣ್ ಮೂಲಕ ದಾಳಿ ನಡೆಸಲಾಗಿದೆ. ದಾಳಿ ನಡೆಸಿದವರು ಯಾರು ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಕಳೆದ ತಿಂಗಳು ಸೌದಿ ಅರ‍್ಯಾಂಕೋ ಕಂಪನಿಯ ಶೈಬಾ ನೈಸರ್ಗಿಕ ಅನಿಲ ಘಟಕದ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ.
ಇತ್ತೀಚಿನ ಕೆಲವು ತಿಂಗಳುಗಳಿಂದ ಯೆಮನ್ನಲ್ಲಿ ಸೌದಿ ಅರೇಬಿಯಾ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ಹೌತಿ ಬಂಡುಕೋರರು ಸೌದಿ ಮೇಲೆ ದಾಳಿ ನಡೆಸುತ್ತಿದ್ದಾರೆ. ಕ್ಷಿಪಣಿಗಳೂ ಮತ್ತು ಡ್ರೋಣ್ಗಳನ್ನು ಬಳಸಿ ಸೌದಿ ವಾಯುನೆಲೆ ಮತ್ತು ಇತರೆ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.

0 Post a Comment: