ಹಿಂದಿ ಹೇರಿಕೆ ವಿರುದ್ಧ ಟ್ವಿಟರ್ ನಲ್ಲಿ ಭಾರೀ ಆಕ್ರೋಶ : ಧ್ವನಿಗೂಡಿಸಿದ ಸಿದ್ದರಾಮಯ್ಯ , ಕುಮಾರಸ್ವಾಮಿ


ಬೆಂಗಳೂರು (TOC ನ್ಯೂಸ್): ಸೆಪ್ಟೆಂಬರ್‌ 14ನ್ನು ದೇಶದಲ್ಲಿ ಹಿಂದಿ ದಿವಸವಾಗಿ ಆಚರಿಸಲಾಗುತ್ತದೆ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿ ಹೇರಿಕೆಯ ಯತ್ನಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಹಿಂದಿ ದಿವಸ ಆಚರಣೆಗೆ ತೀವ್ರ ವಿರೋಧ ಕೇಳಿ ಬಂದಿದೆ.
ಪ್ರಮುಖವಾಗಿ ಸಾಮಾಜಿಕ ಜಾಲತಾಣ ಟ್ಟಿಟ್ಟರ್‌ನಲ್ಲಿ ಹಿಂದಿ ಹೇರಿಕೆ ವಿರುದ್ಧ ಅಭಿಯಾನವೇ ನಡೆಯುತ್ತಿದ್ದು, ಹಲವರು ಹಿಂದಿ ಹೇರಿಕೆ ನಿಲ್ಲಿಸಿ ಎಂಬುದಾಗಿ ಟ್ಟೀಟ್‌ ಮಾಡಿದ್ದಾರೆ. ಪರಿಣಾಮ ಅದೀಗ ನಂಬರ್‌ 1 ಟ್ರೆಂಡ್‌ನಲ್ಲಿದೆ.

ಇದಕ್ಕೆ ಇನ್ನೂ ಒಂದು ಕಾರಣವಿದೆ. ಶನಿವಾರ ಟ್ಟೀಟ್‌ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್‌ ಶಾ ‘ಹಿಂದಿ ಮಾತ್ರವೇ ದೇಶವನ್ನು ಒಂದುಗೂಡಿಸಬಲ್ಲುದು’ ಎಂದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಇನ್ನು ಈ ಬಗ್ಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ,” ಎಂದಿದ್ದಾರೆ.

ಜೊತೆಗೆ, "ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ,” ಎಂಬುದಾಗಿ ಚಾಟಿ ಬೀಸಿದ್ದಾರೆ.

ಇನ್ನು ಕನ್ನಡ ಭಾಷಾ ದಿನದ ಆಚರಣೆ ಯಾವಾಗ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನೋರ್ವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Previous Post
Next Post

0 Post a Comment: