ಡಿಸೆಂಬರ್ ಅಂತ್ಯದೊಳಗೆ ಸಂತ್ರಸ್ತರಿಗೆ ಮನೆ ಹಸ್ತಾಂತರ: ವಿ.ಸೋಮಣ್ಣ


ಮಡಿಕೇರಿ :-ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಮದೆನಾಡು, ಕರ್ಣಂಗೇರಿ ಮತ್ತು  ಜಂಬೂರು ಗ್ರಾಮಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಹಸ್ತಾಂತರಿಸಲಾಗುವುದು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಸದ್ಯ ಜಂಬೂರಿನಲ್ಲಿ 300 ಕ್ಕೂ ಹೆಚ್ಚು ಮನೆಗಳು, ಕರ್ಣಂಗೇರಿಯಲ್ಲಿ 35 ಕ್ಕೂ ಹೆಚ್ಚು ಹಾಗೂ ಮದೆನಾಡು ಸೇರಿದಂತೆ ಒಟ್ಟು 633 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮನೆಗಳನ್ನು ಸಂತ್ರಸ್ತರಿಗೆ ಆದಷ್ಟು ಶೀಘ್ರ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. 
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಈಗಾಗಲೇ ಪ್ರಕೃತಿ ವಿಕೋಪದ ಕಾಮಗಾರಿಗಳನ್ನು ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಲೋಕೋಪಯೋಗಿ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈಗಾಗಲೇ ಪ್ರಕೃತಿ ವಿಕೋಪ ಸಂತ್ರಸ್ತರಿಗೆ 10 ಸಾವಿರ ರೂ. ಬಾಡಿಗೆ ಭತ್ಯೆ ಭರಿಸಲಾಗಿದೆ ಎಂದು ಸಚಿವರು ಮಾಹಿತಿ ನಿಡಿದರು. 
ಪವಿತ್ರ ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂಬಂಧಿಸದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ರಸ್ತೆ ಸರಿಪಡಿಸುವುದು, ಬಸ್ ಸೌಕರ್ಯ, ಗಿಡಗಂಟೆಗಳನ್ನು ಕಡಿಯುವುದು, ಭಕ್ತಾಧಿಗಳಿಗೆ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸುವುದು ಹೀಗೆ ಹಲವು ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ವಿ.ಸೋಮಣ್ಣ ಅವರು ಹೇಳಿದರು. 
ಹಾಗೆಯೇ ಮಡಿಕೇರಿ ದಸರಾ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ದಸರಾವನ್ನು ವ್ಯವಸ್ಥಿತವಾಗಿ ನಡೆಸಲು ಸೂಚನೆ ನೀಡಲಾಗಿದೆ ಎಂದರು. 
ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಸಂಸದರಾದ ಪ್ರತಾಪ್ ಸಿಂಹ, ಎಂ.ಪಿ.ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರು ಇದ್ದರು.
Previous Post
Next Post

0 Post a Comment: