ಕತಾರ್ (TOC ಗಲ್ಫ್ ನ್ಯೂಸ್) :QISF ಆಯೋಜಿಸಿದ್ದ ಕಾರ್ನರ್ ಮೀಟ್ ಹಾಗೂ ಸಾರ್ವಜನಿಕ ಕಾರ್ಯಕ್ರಮವು ಆಗಸ್ಟ್ 20 ರ ಶುಕ್ರವಾರದಂದು ಕತಾರ್ ನ ಮದೀನಾ ಖಲೀಫಾ, ಅಲ್ ಸದ್ದ್ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಿತು.ಮದೀನತ್ ಖಲೀಫಾ ದಲ್ಲಿ ನಡೆದ ಕಾರ್ನರ್ ಮೀಟ್, ನಿಯಾಜ಼್ ತೋಡಾರ್ ರವರ ಸ್ವಾಗತ ಭಾಷಣದೊಂದಿಗೆ
ಪ್ರಾರಂಭವಾಯಿತು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಾಕಿರ್ ಪುಂಜಾಲಕಟ್ಟೆ ಯವರು,
ಬಿಜೆಪಿ ಸರ್ಕಾರದ ಜನವಿರೋಧಿ ಅಧಿಕಾರದ ಭಾಗವಾಗಿ, ದೇಶಾದ್ಯಂತ ದಲಿತರ ಮತ್ತು ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ಕರಾಳ ಕಾನೂನಿನ ವಿರುದ್ಧ, ಜಾತ್ಯತೀತ ಮನೋಭಾವನೆ ಹೊಂದಿದ ಎಲ್ಲರೂ ಒಂದಾಗಿ ಹೋರಾಟದ ರಂಗಕ್ಕೆ ಇಳಿಯಬೇಕೆಂದು ಕರೆ ನೀಡಿದರು.
ಅಂತಿಮವಾಗಿ, ನಿಯಾಜ಼್ ತೋಡಾರ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿ, ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಇದೇ ರೀತಿ, ಅಲ್ ಸದ್ದ್ ನಲ್ಲಿ ನಡೆದ ಕಾರ್ನರ್ ಮೀಟ್ ನಲ್ಲಿ,
ಜಲೀಲ್ ಕಲ್ಲಡಕ ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ,
ಪ್ರಸಕ್ತ ಸನ್ನಿವೇಶದಲ್ಲಿ ಜಾರಿಗೊಳಿಸಿರುವ NRC, ಮುಸ್ಲಿಮರನ್ನು ದೇಶದಿಂದ ಹೊರದಬ್ಬುವ ಪ್ರಯತ್ನದ ಭಾಗವಾಗಿದೆ. ಮಾತ್ರವಲ್ಲ UAPA ಯಂತಹ ಕರಾಳ ಕಾನೂನು, ತ್ರಿವಳಿ ತಲಾಖ್ ಬಿಲ್ ಹಾಗೂ ಮುಸ್ಲಿಮ್ ಧಾರ್ಮಿಕ ನೇತಾರರನ್ನು ಭಯೋತ್ಪಾದಕರೆಂಬಂತೆ ಚಿತ್ರಿಸುವ ಷಡ್ಯಂತ್ರದ ಬಗ್ಗೆ ಜಾಗೃತರಾಗಬೇಕೆಂದು ಎಚ್ಚರಿಸಿದರು.
ಪ್ರಸ್ತುತ ಸರ್ಕಾರದ ಕೋಮುವಾದ ಮತ್ತು ಜಾತಿ ರಾಜಕೀಯದಿಂದ, ದೇಶದ ಸಂವಿಧಾನವು ಅಪಾಯದ ಅಂಚಿನಲ್ಲಿದೆ. ಸಂವಿಧಾನವನ್ನು ಉಳಿಸಿಕೊಳ್ಳಲು, ಹೋರಾಟದ ಅಗತ್ಯವಿದೆ ಎಂದು ತಿಳಿಸಿದರು.
ಇಮ್ರಾನ್ ರವರು ಸ್ವಾಗತ ಭಾಷಣ ಮಾಡಿದರೆ, ಇರ್ಷಾದ್ ಕುಳಾಯಿ
ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಗಿಸಿದರು.
ಇದೇ ಅಭಿಯಾನದ ಅಂಗವಾಗಿ, ಕತಾರ್ ನ ಇಂಡಸ್ಟ್ರಿಯಲ್ ಏರಿಯಾದಲ್ಲಿ
ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವು, ನಯೀಮ್ ಬೆಳಪು ರವರ ಅಧ್ಯಕ್ಷತೆಯಲ್ಲಿ, ಸಾಜಿದ್ ರವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು.
ಉದ್ಘಾಟನಾ ಭಾಷಣ ಮಾಡಿದ, QISF ಕೇಂದ್ರ ಕಾರ್ಯಕಾರಿ ಸಮೀತಿಯ ಸದಸ್ಯರಾದ ಲತೀಫ್ ಮಡಕೇರಿ ಯವರು, QISF ನ ಕಾರ್ಯವೈಖರಿಯ ಬಗ್ಗೆ ಪರಿಚಯಿಸುತ್ತ, ಯಾವುದೇ ಜಾತಿ, ಮತ, ಬೇಧಭಾವಗಳಿಲ್ಲದೇ,
ಅನಿವಾಸಿ ಭಾರತೀಯರು ತೊಂದರೆಗೊಳಗಾದಾಗ, ಅವರೊಡನೆ ವಿಚಾರ ವಿನಿಮಯ ಮಾಡಿ, ಅವರ ತೊಂದರೆಗಳನ್ನು ನಿವಾರಿಸುವಲ್ಲಿ QISF ಮುಂಚೂಣಿಯಲ್ಲಿದೆ. ಕಾನೂನುಭದ್ದವಾಗಿ, ಯಾವುದೇ ತೊಂದರೆ ಇದ್ದಲ್ಲಿ, ಯಾರು ಬೇಕಾದರೂ QISF ನೆರವನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ QISF ಕರ್ನಾಟಕ ರಾಜ್ಯದ ಕಾರ್ಯದರ್ಶಿಗಳಾದ
ಫಸೀಉದ್ದೀನ್ ರವರು, ಭಾರತದ ದೇಶದ ಆರ್ಥಿಕ ವ್ಯವಸ್ಥೆಯು ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ, ಅಲ್ಲಸಂಖ್ಯಾಂತರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಲ್ಪ ಸಂಖ್ಯಾಂತರನ್ನು ಭಯಭೀತ ರನ್ನಾಗಿಸುವ ಹುನ್ನಾರವಾಗಿದೆ. ಗೋಹತ್ಯೆ ವಿಚಾರ ಹಾಗೂ ಕಳ್ಳತನದ ಆರೋಪದಲ್ಲಿ ಮುಸ್ಲಿಮರ ಮೇಲೆ ಗುಂಪು ಹತ್ಯೆ, ಕರಾಳ ಕಾನೂನಿನನಡಿಯಲ್ಲಿ ಬಂಧಿಸಿ ವರ್ಷಗಟ್ಟಲೇ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು ಸಹ ಕೋಮುವಾದಿ ಸರ್ಕಾರದ ಷಡ್ಯಂತ್ರದ ಒಂದು ಭಾಗವಾಗಿದೆ.
ಕೇವಲ ಹೊರದೇಶದಿಂದ ಬಂದ ಹಿಂದುಗಳಿಗೆ ಮಾತ್ರ ದೇಶದಲ್ಲಿ ಪೌರತ್ವ ನೀಡಿ ಮುಸ್ಲಿಮರನ್ನು ಕಡೆಗಣಿಸುತ್ತಿರುವುದು ದೇಶದ ದುರಾಡಳಿತದ ಭಾಗವಾಗಿದೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯನ್ನು, ಎಲ್ಲರೂ ಎದೆಗುಂದದೇ ನಿರ್ಭಯರಾಗಿ ಎದುರಿಸಬೇಕೆಂದು ಕರೆ ನೀಡಿದರು.
QISF ಕರ್ನಾಟಕ ರಾಜ್ಯಾಧ್ಯಕ್ಷ ರಾದ ನಜೀ಼ರ್ ಪಾಷ ರವರು ಕಾರ್ಯಕ್ರಮದಲ್ಲಿ ಅಂತಿಮ ವಾಗಿ ಮಾತನಾಡಿ, ಭಾರತಕ್ಕೆ ಮುಸ್ಲಿಮರು ನೀಡಿದ ಕೊಡುಗೆಗಳು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ, ಜಾತ್ಯಾತೀತ ಹಾಗೂ ಕೋಮುವಾದಿ ಪಕ್ಷಗಳ ಆಳ್ವಿಕೆಯಲ್ಲಿ ದಲಿತರ, ಮುಸ್ಲಿಮರ, ದಮನಿತ ವರ್ಗಗಳ ಹಾಗೂ ಆದಿವಾಸಿಗಳ ಕಡೆಗಣನೆ, ಫ್ಯಾಸಿಸ್ಟರ ಕುತಂತ್ರಗಳಿಗೆ ಬಲಿ ಪಶುಗಳಾಗುತ್ತಿರುವ ಸಾಮಾನ್ಯ ನಾಗರೀಕರು, ಪಠ್ಯಪುಸ್ತಕಗಳ ಕೆಸರೀಕರಣ, ಸಾಹಿತ್ಯದ ಪುಟಗಳ ತಿರುಚುವಿಕೆ ಇನ್ನೂ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಸಿ, ಭಾರತದ ಸ್ವಾತಂತ್ರವನ್ನು ಮತ್ತು ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯತೆ ಇಂದಿನ ಕಾಲದ ಬೇಡಿಕೆಯಾಗಿದೆ. ಇದಕ್ಕಾಗಿ ಒಂದು ಪರ್ಯಾಯ ರಾಜಕೀಯ ಪಕ್ಷದ ಅವಶ್ಯಕತೆ
ಅನಿವಾರ್ಯ ಎಂದು ಹೇಳಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ರಫೀಕ್ ಎರ್ಮಲ್, ರಫೀಕ್ ಉಪ್ಪಿನಂಗಡಿ, ಹಫೀಜ್ ಉಳ್ಳಾಲ, ರಿಜ್ವಾನ್ ಕಲ್ಲಡ್ಕ, ಅನ್ವರ್ ಅಂಗರಗುಂಡಿ, ನಜೀ಼ರ್ ಪುತ್ತೂರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳುವ ಮುಖಾಂತರ, ಅಮಾನುಲ್ಲ ಶೇಖ್ ರವರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.


0 Post a Comment: