ಸಂತ್ರಸ್ತರ ಕುರಿತ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಯ ಕುರಿತು ಜಿಲ್ಲಾಧಿಕಾರಿ ಸ್ಪಷ್ಟನೆ


ಮಡಿಕೇರಿ ಸೆ.25(TOC ನ್ಯೂಸ್):-ಪ್ರಸಕ್ತ (2019-20) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದ ಕುಟುಂಬಗಳ ಪೈಕಿ ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಸಂತ್ರಸ್ತರಿಂದ ವಾಸ ಸ್ಥಳದ ಬಗ್ಗೆ ಹಕ್ಕು ಸ್ಥಾಪಿಸಲು ಮತ್ತು ಸಕ್ರಮೀಕರಣಗೊಳಿಸಲು ಯಾವುದೇ ಪ್ರಯತ್ನ ಮತ್ತು ಹಕ್ಕು ಅಥವಾ ವ್ಯಾಜ್ಯ ಚಲಾಯಿಸುವುದಿಲ್ಲ ಎಂದು ನೆಲ್ಲಿಹುದಿಕೇರಿ ನಿರಾಶ್ರಿತ ಕೇಂದ್ರದಲ್ಲಿ ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆದು ಸರ್ಕಾರದಿಂದ ರೂ.1 ಲಕ್ಷ ಪರಿಹಾರವನ್ನು ಪಾವತಿಸಲು ಕ್ರಮ ವಹಿಸಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟನೆ ನೀಡಿದ್ದಾರೆ. 
ವಾಸಕ್ಕೆ ಯೋಗ್ಯವಾಗಿರುವ ಜಾಗಗಳಲ್ಲಿ ಅನಧಿಕೃತವಾಗಿ ಸರ್ಕಾರಿ ಜಾಗ ಒತ್ತುವರಿಮಾಡಿಕೊಂಡು ಮನೆ ನಿರ್ಮಿಸಿದ್ದು, ಪ್ರಸ್ತುತ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಂದ ಮಾತ್ರ ಸರ್ಕಾರದ ಆದೇಶದಂತೆ ಈ ರೀತಿಯ ಪ್ರಮಾಣ ಪತ್ರವನ್ನು ಪಡೆಯಲಾಗುತ್ತಿದೆ. ವಾಸಕ್ಕೆ ಯೋಗ್ಯವಾಗಿರದ ಜಾಗಗಳಲ್ಲಿ ಅನಧಿಕೃತವಾಗಿ ವಾಸವಿರುವವರಿಗೆ ಇದು ಅನ್ವಯಿಸುವುದಿಲ್ಲ.
ವಾಸಕ್ಕೆ ಯೋಗ್ಯವಾಗಿರದ ನದಿ ತೀರದ ಪ್ರದೇಶಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಪ್ರಸ್ತುತ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ವಾಸಕ್ಕೆ ಯೋಗ್ಯವಾದ ಸ್ಥಳಗಳಿಗೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 
ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಸಹ ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲ ಉಂಟಾಗಲು ಕಾರಣವೇನು ಎಂಬ ಬಗ್ಗೆ 24 ಗಂಟೆಯೊಳಗೆ ವಿವರಣೆ ನೀಡಲು ಸಂಬಂಧಪಟ್ಟ ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಲೆಕ್ಕಿಗರಿಗೆ ನೋಟೀಸು ಜಾರಿ ಮಾಡಲಾಗಿದೆ. ಹಾಗೂ ಸಾರ್ವಜನಿಕರಲ್ಲಿ ಈ ರೀತಿಯ ಗೊಂದಲ ಉಂಟಾಗಲು ಕಾರಣವೇನು? ಎಂಬ ಬಗ್ಗೆ ಸಂಬಂಧಿಸಿದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
Previous Post
Next Post

0 Post a Comment: